ಬೆಂಗಳೂರು: ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ. ದಲಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್.ಸಿ - ಎಸ್.ಟಿ / ಟಿ.ಎಸ್.ಪಿ ಯೋಜನೆಯ 11,130 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸುತ್ತಿರುವುದು ದಲಿತ ವರ್ಗಕ್ಕೆ ಮಾಡಿದ ಮಹಾ ಅನ್ಯಾಯ ಎಂದು ಆಮ್ ಆದ್ಮಿ ಪಕ್ಷದ ಎಸ್ಸಿ, ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಮಾಧ್ಯಮಗೋಷ್ಟಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದ ಹಾದಿಯನ್ನು ತುಳಿಯುತ್ತೇವೆ : ಇಂದು ರಾಜ್ಯ ಎಎಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು ಬಂದಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿದ ದಲಿತ ವರ್ಗ ಇಂದು ಮಹಾ ಮೋಸಕ್ಕೆ ಒಳಗಾಗುತ್ತಿರುವುದು ದುರಂತ. 14 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು, ಈ ಬಾರಿ 4079 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಇಟ್ಟಿದ್ದೇವೆಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳುತ್ತ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ದಲಿತ ವರ್ಗದಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವುದೇ ಕಾರಣಕ್ಕೂ ದಲಿತ ವರ್ಗಕ್ಕೆ ಈ ರೀತಿ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ. ಹೋರಾಟದ ಹಾದಿಯನ್ನು ತುಳಿಯುತ್ತೇವೆ ಎಂದು ಎಚ್ಚರಿಸಿದರು.
ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ: ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಸುರೇಶ್ ರಾಥೋಡ್, ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವುದು ಕಾಂಗ್ರೆಸ್ ಸರ್ಕಾರದ ಪರಿಪಾಠವಾಗಿದೆ. ಈ ಬಗ್ಗೆ ರಾಜ್ಯವ್ಯಾಪಿ ಹೋರಾಟವನ್ನು ರೂಪಿಸುತ್ತೇವೆ. ಇದೇ ತಿಂಗಳ ಆಗಸ್ಟ್ 5 ರಂದು ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ದಲಿತ ನೀತಿಯ ವಿರುದ್ಧದ ಬಗ್ಗೆ ಹೋರಾಟ ಮಾಡಲಿದ್ದೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು. ಈ ವೇಳೆ ಪಕ್ಷದ ಮುಖಂಡ ಗಂಗಬೈಲಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಗ್ಯಾರಂಟಿ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿದೆ: ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳ ಹೆಸರಿನಲ್ಲಿ 75 ಸಾವಿರ ಕೋಟಿಯನ್ನು ಜನರಿಂದ ಸುಲಿಗೆ ಮಾಡುತ್ತಿದೆ. ದಲಿತರ ಹಣವನ್ನು ಬೇರೆಯದಕ್ಕೆ ಬಳಕೆ ಮಾಡಿಕೊಂಡು ದಲಿತರಿಗೆ ಮೋಸ ಮಾಡಲು ಹೊರಟಿದೆ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ (ಆಗಸ್ಟ್ 1-2023)ರಂದು ತಿಳಿಸಿದ್ದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದರು. 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಅವರೇ ಹೇಳಿದ್ದಾರೆ. ಈಗಾಗಲೇ ಜುಲೈ ಮುಗಿದಿದೆ. 50 ಸಾವಿರ ಕೋಟಿ ಕೊಡಲು ಹೋಗಿ ಜನರಿಗೆ 75 ಸಾವಿರ ಕೋಟಿ ಟೋಪಿ ಹಾಕುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ. ಇಂಥ ಮೋಸದಾಟ ಒಪ್ಪಲು ಅಸಾಧ್ಯ. ನಿನ್ನೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನ ಸಂಬಂಧಿತ ಸಭೆ ಮಾಡಿ, ಎಸ್ಸಿ, ಎಸ್ಪಿ, ಟಿಎಸ್ಪಿಯ 11 ಸಾವಿರ ಕೋಟಿ ರೂಪಾಯಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿದೆ: ಗೋವಿಂದ ಕಾರಜೋಳ