ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ಶ್ರೀಮಂತರು ಭೂಮಿ ಖರೀದಿಸಿಲಿ ಎಂದಲ್ಲ. ಬದಲಿಗೆ, ಕೃಷಿ ಕ್ಷೇತ್ರದ ಪ್ರಗತಿಗೆ, ಕೃಷಿ ವಲಯಕ್ಕೆ ಹೆಚ್ಚಿನ ಬಂಡವಾಳ ಅಕರ್ಷಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರೈತ ಸಂಘ, ಹಸಿರು ಸೇನೆ ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರ ಪರ ವಕೀಲರು, ಅರ್ಜಿಗಳಿಗೆ ಸಂಬಂಧ ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಕ್ಷೇಪಣೆಗೆ ಉತ್ತರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ರಾಜ್ಯ ಸರ್ಕಾರದ ಸಮರ್ಥನೆಗಳೇನು - 1974ರ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಮಾಡುವ ಎಲ್ಲ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ತಿದ್ದುಪಡಿಯಿಂದ ರೈತರ ಹಕ್ಕುಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಸೆಕ್ಷನ್ '79ಎ' ಮತ್ತು 'ಬಿ' ಅಡಿ ಭೂ ಖರೀದಿಗೆ ನಿರ್ಬಂಧ ಇದ್ದುದರಿಂದ ಕೈಗಾರಿಕೆಗಳಿಗೆ ಹಾಗೂ ಇನ್ನಿತರ ಉದ್ದೇಶಗಳಿಗೆ ಅಗತ್ಯ ಭೂಮಿ ಸಿಗದೆ ಸಾಕಷ್ಟು ತೊಂದರೆ ಆಗುತ್ತಿತ್ತು. ಹಾಗಾಗಿ ತಿದ್ದುಪಡಿ ಮಾಡಲಾಗಿದೆ.
ಇದನ್ನೂ ಓದಿ: ಮಸ್ಕಿಯಲ್ಲಿ ಈ ಬಾರಿ ನಮಗೆ ಬೂತ್ಗೆ 100 ವೋಟ್ ಹೆಚ್ಚಿಗೆ ಬರಬೇಕು : ಡಿಕೆಶಿ
ತಿದ್ದುಪಡಿಯ ವೇಳೆ ಅರ್ಜಿದಾರರು ಆರೋಪಿಸಿರುವಂತೆ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳನ್ನೂ ಕಡೆಗಣಿಸಿಲ್ಲ. ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ರಾಜ್ಯದಲ್ಲಿ ಒಟ್ಟು 190.54 ಲಕ್ಷ ಹೆಕ್ಟರ್ ಭೂಮಿ ಇದ್ದು, ಅದರಲ್ಲಿ 30.73ಲಕ್ಷ ಹೆಕ್ಟರ್ ಅರಣ್ಯ ಪ್ರದೇಶವವಾಗಿದೆ. 22.94 ಲಕ್ಷ ಹೆಕ್ಟರ್ ಇರುವ ಕೃಷಿ ಭೂಮಿಯಲ್ಲಿ 11.19 ಲಕ್ಷ ಹೆಕ್ಟರ್ ಕೃಷಿ ಕಾರ್ಯಗಳಿಗೆ ಬಳಕೆಯಾಗುತ್ತಿಲ್ಲ. ಶೇ.81ರಷ್ಟು ರೈತರು ಸಣ್ಣ ಮತ್ತು ಮಧ್ಯಮ ವರ್ಗದವರಾಗಿದ್ದು, ಅವರು ಸರಾಸರಿ 0.44 ಹೆಕ್ಟರ್ನಿಂದ 1.40 ಹೆಕ್ಟರ್ ಭೂಮಿ ಹೊಂದಿದ್ದಾರೆ. ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಆಕ್ಷೇಪಣೆಯಲ್ಲಿ ಅಂಕಿ ಅಂಶಗಳನ್ನು ವಿವರಿಸಿಸಿದೆ. ಸರ್ಕಾರ ತನ್ನ ಸಮರ್ಥನೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ವಿಧಾನಪರಿಷತ್ತಿನ ಸದಸ್ಯರಿಗೆ ನೀಡಿರುವ ವಿವರಣೆಯನ್ನೂ ನಮೂದಿಸಿದೆ.