ಬೆಂಗಳೂರು: ಸರ್ಕಾರಿ ಕಚೇರಿಗಳನ್ನು ತೆರೆಯಲು ಸರ್ಕಾರ ಇದೀಗ ಚಿಂತನೆ ನಡೆಸುತ್ತಿದ್ದು, ಅದಕ್ಕಾಗಿ ಮುಂಜಾಗ್ರತಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಕೊರೊನಾ ಲಾಕ್‌ಡೌನ್ ಹಿನ್ನೆಲೆ ಸರ್ಕಾರಿ ಕಚೇರಿಗಳು ಬಹುತೇಕ ಕಾರ್ಯಸ್ಥಗಿತವಾಗಿದೆ. ಅಗತ್ಯ ಸೇವೆ ಒದಗಿಸುವ 11 ಇಲಾಖೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಇಲಾಖೆಗಳು ಕೆಲಸ ನಿಲ್ಲಿಸಿವೆ. ಇದರಿಂದ ಸರ್ಕಾರದ ಆಡಳಿತ ಯಂತ್ರವೂ ಬಹುತೇಕ ನಿಂತೇ ಹೋಗಿದೆ. ಮುಂಜಾಗ್ರತಾ ಕ್ರಮವಾಗಿ ಎ, ಬಿ ಮತ್ತು ಸಿ ವರ್ಗದ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಜೊತೆಗೆ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ನೀಡಿ ಕಳುಹಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳನ್ನು ಪುನರಾರಂಭಿಸಲು ಮುಂದಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಸರ್ಕಾರಿ ಕಚೇರಿಗಳನ್ನು ತೆರೆಯೋದು ಸರ್ಕಾರ ನಿಲುವು.
ಸರ್ಕಾರಿ ಕಚೇರಿಗಳಿಗೆ ಮಾರ್ಗಸೂಚಿ:
ಈಗಾಗಲೇ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಕಚೇರಿಗಳನ್ನು ಭಾಗಶ: ಪುನರಾರಂಭಿಸಿದೆ. ಸೋಮವಾರದಿಂದ ಕೇಂದ್ರ ಸರ್ಕಾರದ ಬಹುತೇಕ ಕಚೇರಿಗಳು ಕಾರ್ಯಾರಂಭಿಸಿವೆ. ಇದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕೆಲ ನಿರ್ಬಂಧಗಳೊಂದಿಗೆ ಸರ್ಕಾರಿ ಕಚೇರಿಗಳನ್ನು ಕಾರ್ಯಾರಂಭಿಸಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಲಾಕ್‌ಡೌನ್ ವೇಳೆ ಸೀಮಿತ ಸಡಿಲಿಕೆ ಸಂಬಂಧ ನಾಳೆ ರಾಜ್ಯಗಳಿಗೆ ಮಾರ್ಗಸೂಚಿ ಹೊರಡಿಸಲಿದೆ.
ಯಾವ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ, ವಾರ್ಡ್ಗಳಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಅಂಥ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳ ಪುನರಾರಂಭಕ್ಕೂ ಮುಂದಾಗಿದೆ. ವಿವಿಧ ಇಲಾಖೆಗಳು ಈಗಾಗಲೇ ಕೆಲ ನಿರ್ಬಂಧಗಳೊಂದಿಗೆ ಕಚೇರಿ ಪುನರಾಂಭಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಬಗ್ಗೆ ನಾಳೆಯೊಳಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಾರ್ಯನಿರ್ವಹಣೆಗೆ ಮಾರ್ಗಸೂಚಿ ಏನು?:-
- 50 ವರ್ಷ ಮೇಲ್ಪಟ್ಟ ವಯಸ್ಸಿನ ಸಿಬ್ಬಂದಿಗೆ ವಿನಾಯಿತಿ
- ಕೇವಲ 50% ಸಿಬ್ಬಂದಿಯೊಂದಿಗೆ ಕಾರ್ಯಾರಂಭ
- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ
- ಮಾಸ್ಕ್ ಧರಿಸುವುದು ಕಡ್ಡಾಯ
- ಕೆಲವರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚನೆ
- ಎಲ್ಲಾ ಸಚಿವರ ಕಚೇರಿಗಳಲ್ಲಿ 1/3ರಷ್ಟು ಸಿಬ್ಬಂದಿ ಇರಬೇಕು
- ಜಂಟಿ, ಅಧೀನ ಕಾರ್ಯದರ್ಶಿಗಳು ಹಾಜರಿರಬೇಕು.