ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಸಿಎಂ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ 3,000 ರೂ. ಸಹಾಯಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಕೋವಿಡ್-19ರ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಜೂನ್ 7 ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ತಲಾ 3000 ರೂ. ದಂತೆ ಸಹಾಯಧನ ವಿತರಿಸುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರು.
ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದ ಒಟ್ಟು 24,98,521 ನೋಂದಾಯಿತ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಲಾ 3,000 ರೂ. ದಂತೆ ಒಟ್ಟು 749.55 ಕೋಟಿ ರೂ.ಗಳಷ್ಟು ಮೊತ್ತ ಬಿಡುಗಡೆ ಮಾಡಲಾಗಿದೆ. ಮಂಡಳಿಯ ಸುಂಕ ನಿಧಿಯಿಂದ ಸಹಾಯ ಧನವಾಗಿ ಪಾವತಿಸಲು ಹಾಗೂ ಕಟ್ಟಡ ಕಾರ್ಮಿಕರಿಗೆ ತಲಾ 3,000 ರೂನಂತೆ ಸಹಾಯಧನವನ್ನು ನೇರವಾಗಿ ಅವರುಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಷರತ್ತುಗಳೇನು? :
1. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೊಂಡ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನು ಪಾವತಿಸುವುದು.
2. ಡೆಬಿಟ್ ಮೂಲಕ ವರ್ಗಾಯಿಸುವಾಗ ಫಲಾನುಭವಿಯ ಪುನರಾರ್ತನೆಯಾಗದಂತೆ/ ನಕಲೀಕರಣವಾಗದಂತೆ ಜಾಗ್ರತೆ ವಹಿಸುವುದು.
3. ಒಬ್ಬರೇ ಫಲಾನುಭವಿಯು ಅಸಂಘಟಿತ ಮಂಡಳಿಗಳಿಂದ ಫಲಾನುಭವಿಯಾಗದಂತೆ, ಪುನರಾವರ್ತನೆಯಾಗದಂತೆ ಜಾಗ್ರತೆ ವಹಿಸುವುದು.
4. ಫಲಾನುಭವಿಯ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ದೂರವಾಣಿ ಸಂಖ್ಯೆ, ವಿಳಾಸ, ಅಂಚೆ ಸೂಚ್ಯಂಕ ಸಂಖ್ಯೆ, ಇಂತಹ ಇತರೆ ಗುರುತಿಸುವಿಕೆಗಳನ್ನು (Identifiers) ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಂಡು ಖಚಿತಪಡಿಸಿಕೊಳ್ಳುವುದು.
5. ಕಾಲಕಾಲಕ್ಕೆ ಎಷ್ಟು ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆಯೆಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.
6. ಸದರಿ ವಿತರಣೆಯು ವಿಳಂಬವಾಗದಂತೆ ಎಚ್ಚರಿಕೆ ವಹಿಸುವುದು.
7. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಈ ಸಹಾಯಧನವನ್ನು ಪಾವತಿಸುವ ಸಲುವಾಗಿ ಸೂಕ್ತ ಮಾರ್ಗಸೂಚಿಗಳನ್ನು (SOP) ಸಿದ್ಧಪಡಿಸುವುದು.
8. ಮುಂದಿನ ಮಂಡಳಿಯ ಸಭೆಯಲ್ಲಿ ಸದರಿ ವೆಚ್ಚಕ್ಕೆ ಘಟನೋತ್ತರ ಮಂಜೂರಾತಿಯನ್ನು ಪಡೆಯುವುದು.
9. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ, ಕೇಂದ್ರ ಸರ್ಕಾರದ The Building and Other Construction Workers (Regulation of Employment and Conditions of Service) Act 19960 (Central act No. 27 of 1996) arte ರಾಜ್ಯ ಸರ್ಕಾರದ The Building and Other Construction Workers (Regulation of Employment and Conditions of Service) (Karnataka) Rules, 2006ರ ಪ್ರಕಾರ ಪರಿಶೀಲಿಸಿ ಕ್ರಮವಹಿಸುವುದು.
10. ಸದರಿ ಯೋಜನೆ ಜಾರಿ ಮಾಡುವ ಜವಾಬ್ದಾರಿಯನ್ನು ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರಿಗೆ ವಹಿಸಲಾಗಿದೆ.