ಬೆಂಗಳೂರು: ಕೊರೊನಾ ಮೊದಲ ಅಲೆಯಲ್ಲೇ ಹೈರಾಣಾಗಿದ್ದ ರೈತರು, ಇದೀಗ ಆರಂಭವಾಗಿರುವ ಕೊರೊನಾ ಎರಡನೇ ಅಲೆ ರೈತರ ಪಾಲಿಗೆ ದೊಡ್ಡ ಸಂಕಟ ತಂದೊಡ್ಡಲಿದೆ. ಹಾಗಾಗಿ, ರೈತರಿಗೆ ಕೊರೊನಾ ಆರ್ಥಿಕ ಸಂಕಷ್ಟ ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರಸಕ್ತ ವರ್ಷ 30 ಲಕ್ಷ ರೈತರಿಗೆ ಸುಮಾರು 20 ಸಾವಿರ ಕೋಟಿ ರೂ. ಬೆಳೆಸಾಲ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಕಳೆದ ವರ್ಷ ಕೋವಿಡ್ ಪರಿಣಾಮ ಲಾಕ್ಡೌನ್ನಿಂದಾಗಿ ರೈತರು ಬೆಳೆದ ಬೆಳೆ ಮಾರಾಟ ಮಾಡಲಾಗದೇ ಭಾರಿ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವೇ ಮಂದಿ ರೈತರು ಸ್ವಲ್ಪಮಟ್ಟಿಗೆ ತರಕಾರಿ, ಹಣ್ಣು ಬೆಳೆದಿದ್ದರೆ ಹೊರತು ಬಹುತೇಕ ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗದೇ ಬಾರಿ ಆರ್ಥಿಕ ಮುಗ್ಗಟ್ಟು ತಲೆದೋರಿತ್ತು. ಈ ಕೊರೊನಾ ಪರಿಣಾಮದ ನಂತರ ರೈತರು ಸಾಲ ಮರುಪಾವತಿಗೆ ಇನ್ನಿಲ್ಲದ ಕಷ್ಟಗಳನ್ನು ಅನುಭವಿಸಿದ್ದರು. ಆದರೆ, ಈ ಬಾರಿ ರೈತರ ನೆರವಿಗೆ ಸರ್ಕಾರ ಬಂದಿದ್ದು, ಕೃಷಿ ಸಾಲಕ್ಕಾಗಿ ನಬಾರ್ಡ್ನಿಂದ ದೊರೆಯುವ ಮರು ಹಣಕಾಸು ನೆರವನ್ನು ಪ್ರಸ್ತುತ ಇರುವ ಶೇ. 35ರಿಂದ ಶೇ. 50ಕ್ಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರೈತರಲ್ಲಿ ಬೆಳೆ ಸಾಲ ಸಂಬಂಧ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸಭೆಯಲ್ಲೂ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳಿಂದ ಸಾಲ ಮನ್ನಾ ಕುರಿತು ಬರುವ ಕ್ಲೈಮ್‌ಗಳಿಗೆ ತಕ್ಷಣ ಹಣಕಾಸು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಹಕಾರ ಇಲಾಖೆಯು 2020-21ನೇ ಸಾಲಿನಲ್ಲಿ 1.31 ಲಕ್ಷ ರೈತರಿಗೆ 1,960 ಕೋಟಿ ರೂ. ಸಾಲ ನೀಡಿದೆ. 24.36 ಲಕ್ಷ ರೈತರಿಗೆ 15,300 ಕೋಟಿ ರೂ. ಸಾಲ ನೀಡುವ ಗುರಿ ಇತ್ತು. ಆದರೆ, 25.67 ಲಕ್ಷ ರೈತರಿಗೆ 17,260 ಕೋಟಿ ರೂ. ಸಾಲ ನೀಡಲಾಗಿದೆ. 2021-22 ರ ಸಾಲಿನಲ್ಲಿ 30 ಲಕ್ಷ ರೈತರಿಗೆ 20 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಇದ್ದು, ಹೊಸದಾಗಿ 3 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶ ಹೊಂದಲಾಗಿದೆ. ಬೆಳೆ ಸಾಲ ಮನ್ನಾ ದಡಿ ತಡೆ ಹಿಡಿದಿದ್ದ ಸುಮಾರು ಒಂದು ಲಕ್ಷ ರೈತರ ಸಾಲ ಮನ್ನಾವನ್ನು ಕೂಡ ವಿತರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.