ಬೆಂಗಳೂರು: ನವೆಂಬರ್ 14ರಿಂದ 16ರವರೆಗೆ ಆಚರಿಸಲ್ಪಡುವ ದೀಪಾವಳಿ ಹಬ್ಬದ ಸಂಬಂಧವಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಪಟಾಕಿಯ ಬಾಕ್ಸ್ ಮೇಲೆ ಸಿಎಸ್‌ಐಆರ್- ನೀರಿ ಮತ್ತು ಪಿಇಎಸ್‌ಒದ ಲೋಗೊ, ಕ್ಯೂಆರ್ ಕೋಡ್ ಇರುವ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡಬೇಕು ಹಾಗೂ ಬಳಸಬೇಕು. ಈ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಆದೇಶಿಸಿದೆ.
ಹಸಿರು ಪಟಾಕಿಯಲ್ಲಿ ಮಾಲಿನ್ಯ, ಶಬ್ಧದ ಪ್ರಮಾಣ ಕಡಿಮೆ ಇರುತ್ತದೆ ಎಂಬುದನ್ನು ಆದೇಶದಲ್ಲಿ ವಿವರಿಸಲಾಗಿದೆ. ಕೌನ್ಸಿಲ್ ಅಫ್ ಸೈಟಿಂಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ - ನ್ಯಾಷನಲ್ ಎನ್ವಿರಾನ್ಮೆಂಟಲ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ನೀರಿ) ಮಾರ್ಗದರ್ಶಿ ಸೂತ್ರದ ಅನ್ವಯ ಹಸಿರು ಪಟಾಕಿ ತಯಾರಾಗಬೇಕು. ಇದಕ್ಕೆ ಪೆಟ್ರೋಲಿಯಂ ಅಂಡ್ ಎಕ್ಸ್‌ಪ್ಲೊಸೀವ್ ಸೇಫ್ಟಿ ಸಂಸ್ಥೆ ಪ್ರಮಾಣೀಕರಿಸಿರಬೇಕು. ಹಸಿರು ಪಟಾಕಿಯು ಸುರ್ ಸುರ್ ಬತ್ತಿ, ಹೂ ಕುಂಡ ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಇದು ವಾಯು ಮಾಲಿನ್ಯ ಸೃಷ್ಟಿಸುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.
ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಸಿಡಿಸಬಾರದು ಮತ್ತು ಮಾರಾಟ ಮಳಿಗೆಗಳಲ್ಲಿಯೂ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಹಾಗೆಯೇ ಪಟಾಕಿ ಮಾರಾಟ ಮತ್ತು ಬಳಕೆಯ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹಸಿರು ಪಟಾಕಿಗಳನ್ನು ಮಾತ್ರ ಪಟಾಕಿ ಮಾರಾಟಗಾರರಿಂದ ಮಾರಾಟ ಮಾಡಲು ಮತ್ತು ಸಾರ್ವಜನಿಕರಿಂದ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಅನುಮತಿ ನೀಡಲಾಗಿದೆ. 'ಹಸಿರು ಪಟಾಕಿಗಳು' ಎಂದರೆ ಏನೆಂಬುದರ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಲು ಮತ್ತು ಖರೀದಿಗೆ ಗಮನ ಹರಿಸಲು ವಿವರಣೆಗಳನ್ನು ಹೊರಡಿಸಲಾಗಿದೆ. ಈ ವಿವರಣೆಗಳಲ್ಲಿ ಹಸಿರು ಪಟಾಕಿಗಳಲ್ಲಿನ ಖರೀದಿಗೆ ಗಮನಿಸಬೇಕಾದ ಚಿಹ್ನೆ ರಾಷ್ಟ್ರೀಯ ಪ್ರಮಾಣಪತ್ರ ಮತ್ತು ರಾಸಾಯನಿಕ ಬಳಕೆಗಳ ಬಗ್ಗೆ ತಿಳಿಸಲಾಗಿದೆ.