ಬೆಂಗಳೂರು : ಅನ್ಲಾಕ್ ನಂತರವೇ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿದ್ದು, ನಗರ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ಒಂದು ಸಾವಿರ ದಂಡ ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ. ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಾಳೆ ಅಂತಿಮವಾಗಿ ಪ್ರಕಟಿಸುತ್ತೇವೆ ಎಂದು ಹೇಳಿದರು.
ಮೈಸೂರು, ಹಾಸನ, ದಕ್ಷಿಣ ಕನ್ನಡ, ಶಿವಮೊಗ್ಗ, ತುಮಕೂರು, ಕೊಪ್ಪಳ ಜಿಲ್ಲೆಗಳ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಚರ್ಚೆ ನಡೆದಿದೆ. ಕೊರೊನಾ ಹೆಚ್ಚಳದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ನಾಗರೀಕರ ಸಹಕಾರ ಮುಖ್ಯ. ಸರ್ಕಾರದ ಜೊತೆ ಸಹಕರಿಸಬೇಕು. ತಾವೇ ಸ್ವಯಂ ಮಾರ್ಗಸೂಚಿ ಹಾಕಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ಮಾಸ್ಕ್ ಧರಿಸದೆ ಬೇರೆಯವರಿಗೆ ಅನಾಹುತ ತರುತ್ತಿದ್ದಾರೆ. ನಿರೀಕ್ಷಿಸಿದಷ್ಟು ಫಲಿತಾಂಶ ನಾಗರೀಕರಿಂದ ಸಿಗುತ್ತಿಲ್ಲ ಎಂದು ಹೇಳಿದರು.
ಕೋವಿಡ್ ಬಗ್ಗೆ ಅರಿವು : ಕೋವಿಡ್ ಬಗ್ಗೆ ಅರಿವು ಮೂಡಿಸುವ ಕ್ರಮಕ್ಕೆ ಮುಂದಾಗಿದ್ದೇವೆ. ಸಿನಿಮಾ ನಟರು, ಧಾರ್ಮಿಕ ಗುರುಗಳ ಸಹಕಾರ ತೆಗೆದುಕೊಳ್ಳುತ್ತೇವೆ. ಅವರ ಸಹಕಾರದಿಂದ ಜಾಗೃತಿ ಮೂಡಿಸುತ್ತೇವೆ. ಮಾಧ್ಯಮಗಳ ಮೂಲಕವೂ ಅರಿವು ಮೂಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮಾಲ್, ಮಾರ್ಕೆಟ್ಗಳಲ್ಲಿ ಕಡ್ಡಾಯ ಮಾಡುತ್ತೇವೆ. ಅಂಗಡಿ, ಮಾಲ್ ಮಾಲೀಕರ ಮೇಲೂ ಕ್ರಮ ತೆಗೆದುಕೊಳ್ತೇವೆ. ಲೈಸೆನ್ಸ್ ಮುಟ್ಟುಗೋಲು, ದಂಡ ಹಾಕುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನು ಮದುವೆ, ಸಭೆ, ಸಮಾರಂಭಗಳಲ್ಲಿ 50 ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿದ್ದರೆ ಅವಕಾಶ ಕೊಟ್ಟ ಮಾಲೀಕರಿಗೆ ದಂಡ ವಿಧಿಸಿ, ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂಸದ ತೇಜಸ್ವಿ ಸೂರ್ಯ ಜಾಥಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಎಲ್ಲರಿಗೂ ಒಂದೇ. ತೇಜಸ್ವಿ ಸೂರ್ಯ, ಸುಧಾಕರ್ ಇಬ್ಬರಿಗೂ ಒಂದೇ. ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದರು.
ಮಾಸ್ಕ್ ಕಡ್ಡಾಯ : ಮಾಸ್ಕ್ ಕಡ್ಡಾಯ, ಸರ್ಕಾರಿ ಕಚೇರಿಗಳಿಂದಲೇ ಪ್ರಾರಂಭ ಮಾಡುತ್ತೇವೆ. ಮಾಸ್ಕ್ ಇಲ್ಲದೆ ಯಾರಿಗೂ ಪ್ರವೇಶವಿಲ್ಲ. ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಕ್ಕೆ ತರುತ್ತೇವೆ. ಇದಕ್ಕಾಗಿ ಗೃಹ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಕಾರ ಪಡೆಯುತ್ತೇವೆ. ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಡುತ್ತೇವೆ. ನಗರಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅವಕಾಶ ನೀಡಲಾಗುತ್ತದೆ. ದಂಡ ವಸೂಲಿ, ಕಠಿಣ ಕ್ರಮತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ ಎಂದು ಹೇಳಿದರು.
ಮತ್ತೆ ಲಾಕ್ಡೌನ್ ಮಾಡುವ ಸಂದರ್ಭ ಬರುವುದು ಬೇಡ. ಇದನ್ನು ಜನ ಅರ್ಥ ಮಾಡಿಕೊಂಡರೆ ಉತ್ತಮ. ನನ್ನ ಆರೋಗ್ಯ ನನ್ನ ಕೈಯಲ್ಲಿ, ನನ್ನ ದೇಹ ನನ್ನ ಹೊಣೆ. ಇದನ್ನು ಸಾರ್ವಜನಿಕರು ಅಳವಡಿಸಿಕೊಳ್ಳಬೇಕು. ಮಾಸ್ಕ್ ಹಾಕದವರಿಗೆ ಪ್ರಸ್ತುತ ನಗರ ಪ್ರದೇಶಗಳಲ್ಲಿ 200 ರೂ, ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡವಿತ್ತು. ಈಗ 1000 ರೂ. ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 500 ರೂ. ಹಾಕಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಜನರಿಗೆ ದಂಡ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.