ಬೆಂಗಳೂರು: ರಾಜ್ಯದ 35 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಕೈಗಾರಿಕಾ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿಯುಳ್ಳ ಮಹತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಗುರುವಾರ ಅಂಕಿತ ಹಾಕಿದೆ. ವಿಕಾಸಸೌಧದಲ್ಲಿ ಇಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಈ ಮಹತ್ವಾಕಾಂಕ್ಷಿ ಒಪ್ಪಂದ ನೆರವೇರಿತು. ಇಲಾಖೆಯ ಆಯುಕ್ತ ಪಿ.ಪ್ರದೀಪ್ ಮತ್ತು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ನ ವ್ಯವಸ್ಥಾಪಕ ನಿರ್ದೇಶಕ ಬಾಲಾಜಿ ಸೌರಿರಾಜನ್ ಒಡಂಬಡಿಕೆಗೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಅಂತಾರಾಷ್ಟ್ರೀಯ ಗುಣಮಟ್ಟದ ಈ ಪ್ರಯೋಗಾಲಯಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಉದ್ಯಮಿಗಳು, ವಿಷಯ ಪರಿಣತರು ಮತ್ತು ಹಿರಿಯ ವಿದ್ಯಾರ್ಥಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಸ್ಥಾಪಿಸುತ್ತಿರುವ ಈ ಸೌಲಭ್ಯದಿಂದ ನಮ್ಮ ಯುವಜನರು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿತುಕೊಂಡು, ಉದ್ಯೋಗಾರ್ಹರಾಗಲಿದ್ದಾರೆ. ಈ ಒಡಂಬಡಿಕೆಯ ಅಡಿಯಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯಗಳನ್ನೂ ಸ್ಥಾಪಿಸಲಾಗುವುದು" ಎಂದರು.
ಇದನ್ನೂ ಓದಿ: ಎಸ್ಸಿ - ಎಸ್ಟಿ ಮೀಸಲು ಹೆಚ್ಚಳ 9ನೇ ಪರಿಚ್ಛೇದಕ್ಕೆ ಸೇರ್ಪಡೆ: ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ನಿರ್ಧಾರ?
"ಈ ನೂತನ ಪ್ರಯೋಗಾಲಯಗಳು ಔರಾದ್, ಬಾಗೇಪಲ್ಲಿ, ಬೆಂಗಳೂರು, ಬೆಳಗಾವಿ, ಬೀದರ್, ಚಾಮರಾಜನಗರ, ದೇವದುರ್ಗ, ಹಾಣಗಲ್, ಹರಿಹರ, ಝಳಕಿ, ಜೋಯಿಡಾ, ಕಲಬುರಗಿ, ಕಲಗಿ, ಕಂಪ್ಲಿ, ಕೊಪ್ಪಳ, ಲಿಂಗಸುಗೂರು, ಮಂಗಳೂರು, ಮೊಸಳೆ ಹೊಸಹಳ್ಳಿ, ಮುಂಡಗೋಡು, ಮೈಸೂರು, ರಾಯಚೂರು, ರಾಮನಗರ, ಶಿರಾಳಕೊಪ್ಪ, ಶಿವಮೊಗ್ಗ, ಸಿದ್ಧಾಪುರ, ಶ್ರೀರಂಗಪಟ್ಟಣ, ಸುರಪುರ, ಉಡುಪಿ ಮತ್ತು ವಿಜಯಪುರದಲ್ಲಿ ಇರುವ ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ" ಎಂದು ವಿವರಿಸಿದರು.
"ಸ್ಯಾಮ್ಸಂಗ್ ಕಂಪನಿಯು ದಕ್ಷಿಣ ಕೊರಿಯಾದಿಂದ ಹೊರಗೆ ಆರಂಭಿಸುತ್ತಿರುವ ಬಹುದೊಡ್ಡ ಉಪಕ್ರಮವಾಗಿದ್ದು, ಕೇಂದ್ರ ಸರಕಾರವು ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಪರಿಕಲ್ಪನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಆನ್‌ಲೈನ್ ಕೋರ್ಸುಗಳು ಲಭ್ಯವಿದ್ದು, ಇವುಗಳನ್ನು ಐಒಟಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಒಟ್ಟು 1,080 ಸಾಧನ-ಸಲಕರಣೆಗಳು ಇರಲಿದ್ದು, ಸ್ಯಾಮ್ಸಂಗ್ ಇದಕ್ಕಾಗಿ 1.52 ಕೋಟಿ ರೂ. ವಿನಿಯೋಗಿಸುತ್ತಿದೆ" ಎಂದು ಹೇಳಿದರು.
"ವಿದ್ಯಾರ್ಥಿಗಳು ಇವುಗಳ ಮೂಲಕ ಸ್ಥಳೀಯ ಮತ್ತು ಜಾಗತಿಕ ಮಟ್ಟದ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಕಂಡುಹಿಡಿಯಬಹುದು. ಇಲ್ಲಿರುವ ಸಾಧನಗಳನ್ನು ಡ್ರೋನ್, ಆಟೋಮೊಬೈಲ್, ಬಯೋ ಮೆಡಿಕಲ್, ಕೃಷಿ ತಂತ್ರಜ್ಞಾನ, ಬಯೋಟೆಕ್ ಮತ್ತು ಎಸ್‌ಟಿಇಎಂ ವಲಯದ ಪ್ರಯೋಗಗಳಲ್ಲಿ ಬಳಸಿಕೊಳ್ಳಬಹುದು" ಎಂದು ತಿಳಿಸಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮಾತನಾಡಿ, "ಸದ್ಯಕ್ಕೆ ಸ್ಯಾಮ್ಸಂಗ್ ಕಂಪನಿಯು ಎರಡು ಪಾಲಿಟೆಕ್ನಿಕ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯಗಳನ್ನು ಸ್ಥಾಪಿಸಲು ಒಪ್ಪಿಕೊಂಡಿದೆ. ಆದರೆ 15 ಸ್ಥಳಗಳಲ್ಲಾದರೂ ಇಂತಹ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು" ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಪುಣ್ಯಕೋಟಿ ಗೋ ದತ್ತು ಯೋಜನೆಗೆ ಇನ್ನೂ ಸಿಗದ ಜನಸ್ಪಂದನೆ: ಯೋಜನೆ ಮೇಲೆ ಶಾಸಕರಿಗೇ ಇಲ್ಲದ ಕಾಳಜಿ!