ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರ ವೇಳೆ ಅವಾಚ್ಯ ಶಬ್ದ ಬಳಕೆ ಮಾಡಿದ ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಶಾಸಕ ಸಿ ಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಮೋದಿ ವಿರೋಧಿಸುವವರು ತಾಯಿ ಗಂಡರು ಅಂತಾ ಹೇಳಿದ್ದ ರವಿ ವಿರುದ್ಧ ಈ ದೂರು ಸಲ್ಲಿಕೆಯಾಗಿದೆ. ಶಾಸಕ ತಾಯಿ ಕುಲಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಮಹಿಳಾ ಆಯೋಗಕ್ಕೆ ಪ್ರದೇಶಿಕ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್ನಾಥ್ ಹಾಗೂ ಜಯನಗರ ಶಾಸಕಿ ಸೌಮ್ಯ ರೆಡ್ಡಿ ದೂರು ಸಲ್ಲಿಕೆ ಮಾಡಿದ್ದಾರೆ. ಮೂರ್ನಾಲ್ಕು ಬಾರಿ ಎಂಎಲ್ಎ ಆದವರು ಈ ರೀತಿ ಮಾತನಾಡಬಾರದು. ಒಬ್ಬ ತಾಯಿಯ ಬಗ್ಗೆ ಈ ರೀತಿ ಮಾತನಾಡಿರುವುದು ತಪ್ಪು. ಆ ಪದವನ್ನ ಯಾಕೆ ಬಳಕೆ ಮಾಡಬೇಕು? ಈ ಪದ ಬಳಸಿದ್ದು ತಪ್ಪು. ಸಂಪೂರ್ಣ ತಾಯಿ ಕುಲಕ್ಕೆ ಮಾಡಿದ ಅವಮಾನ ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಮೋದಿ ವಿರೋಧಿಸುವವರು ತಾಯಿ ಗಂಡರು. ಯಾರಾದರೂ ಜಾತಿಗೆ ಕಾರಣಕ್ಕೆ, ಧರ್ಮದ ಕಾರಣಕ್ಕೆ ಮತ ಹಾಕದೇ ಹೋದರೆ ಉಂಡ ಮನೆಗೆ ದ್ರೋಹ ಬಗೆದಂತೆ " ಎಂದು ಸಿಟಿ ರವಿ ಹೇಳಿದ್ದಾರೆ. ಈ ಹೇಳಿಕೆಯನ್ನು ರಾಜ್ಯದ ಪ್ರಮುಖ ಮಾಧ್ಯಮಗಳು ತಮ್ಮ ಟ್ವೀಟರ್ ಖಾತೆಯಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟಿಸಿವೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಮಹಿಳಾ ವಿರೋಧಿ ಹೇಳಿಕೆ ನೀಡಿ ಸ್ತ್ರಿಯರ ಘನತೆಗೆ ಧಕ್ಕೆ ತಂದಿರುವ ಶಾಸಕ ಸಿಟಿ ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಆಗ್ರಹಿಸಿದೆ.