ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದ ಬಳಿಕ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲ ರಾಜ್ಯ ನಾಯಕರು ಮುನಿಸು ಮರೆತು ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಯಲ್ಲಿ ಉಂಟಾಗುವ ಪ್ರತಿರೋಧಗಳ ಲಾಭ ಪಡೆಯಲು ಪ್ಲ್ಯಾನ್ ಮಾಡಿದ್ದ ಕೈ ಟೀಂ ಕೊಂಚ ಮೌನವಾಗಿದ್ದು, ಹೊಸ ಸಿಎಂ ಕೆಲಸ ಆರಂಭಿಸಲಿ, ಅವರ ಕಾರ್ಯವೈಖರಿ ನೋಡಿಕೊಂಡು ಮಾತನಾಡುತ್ತೇವೆ ಎನ್ನುತ್ತಿದ್ದಾರೆ.
ಪ್ರಸ್ತುತ, ನೆರೆ ಪೀಡಿತ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗೂಡಿ ವಿವಿಧ ಜಿಲ್ಲೆಗಳಿಗೆ ತೆರಳಿ ಕೆಳ ಹಂತದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ನಾಯಕರ ಪಾಠ : ರಾಷ್ಟ್ರೀಯ ನಾಯಕ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ದೆಹಲಿ ಕರೆಸಿಕೊಂಡು ಚರ್ಚೆ ನಡೆಸಿದ್ದರು. ಈ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಪಾಠ ಮಾಡಿದ್ದಾರೆ ಎನ್ನಲಾಗಿದೆ.
ಕೇವಲ ನಾಯಕತ್ವದ ಬಗ್ಗೆ ಮಾತನಾಡಿ ಪಕ್ಷದ ವರ್ಚಸ್ಸು ಕೆಡಿಸಬೇಡಿ. ಯಾರಿಗೆ ನಾಯಕತ್ವದ ಜವಾಬ್ದಾರಿ ನೀಡಬೇಕು ಎಂಬ ಅರಿವು ನಮಗಿದೆ. ಸಕಾಲಕ್ಕೆ ಯಾರಿಗೆ ಯಾವ ಜವಾಬ್ದಾರಿ ವಹಿಸಬೇಕು ಎನ್ನುವುದು ಗೊತ್ತಿದೆ. ತಾವು ಸದ್ಯ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ. ತಮ್ಮ ವೈಯಕ್ತಿಕ ಪರಿಶ್ರಮಕ್ಕೆ ಪಕ್ಷದ ಗೌರವ ಇದ್ದೇ ಇರುತ್ತದೆ. ತಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಆಧರಿಸಿ ಗೌರವ, ಹುದ್ದೆ ಸಿಗಲಿದೆ.
ಒಟ್ಟಾಗಿ ಪ್ರಯತ್ನ ಮಾಡಿದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಇನ್ನೊಮ್ಮೆ ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವದ ಮಾತು ಬರಬಾರದು. ಯಾರಿಗೆ ನಾಯಕತ್ವ ನೀಡಬೇಕೆಂಬ ನಿರ್ಧಾರ ಪಕ್ಷದ ಹೈಕಮಾಂಡ್ ಮಾಡಲಿದೆ. ಮಧ್ಯೆ ಪ್ರಸ್ತಾಪ ಮಾಡಿದಲ್ಲಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎಂಬ ಮಾಹಿತಿಯಿದೆ.
ಸಂಘಟನೆಗೆ ಒತ್ತು : ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಈಗಾಗಲೇ ಎರಡು ಹಂತಗಳಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದಾರೆ. ಕಳೆದ ವಾರ ತುಮಕೂರಿನಲ್ಲಿ ಸಭೆ ನಡೆದಿದೆ. ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅನಾರೋಗ್ಯ ಹಿನ್ನೆಲೆ ಮಂಗಳೂರಿನಲ್ಲಿ ಸಭೆ ನಡೆದಿಲ್ಲ. ನಿನ್ನೆ ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಸೇರ್ಪಡೆ ಜೊತೆ ಆ ಭಾಗದ ಜಿಲ್ಲಾ ನಾಯಕರ ಸಭೆ ನಡೆಸಲಾಗಿದೆ.
ಇಂದು ಹಳೆ ಮೈಸೂರು ಭಾಗದ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ಶ್ರಮ ತೊಡಗಿಸಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಾಯಕತ್ವ ಬದಲಾವಣೆ ನಿರೀಕ್ಷೆ ಹುಸಿ: ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅವಮಾನ ಮಾಡಿದೆ ಎಂದು ಹೇಳಿ ಲಿಂಗಾಯತ ಮತ ಸೆಳೆಯುವ ಅವಕಾಶ ಕಾಂಗ್ರೆಸ್ ಇಲ್ಲವಾಗಿದೆ. ಯಾಕೆಂದರೆ ಬಿಎಸ್ವೈ ತಮ್ಮ ಬಲ ಕಳೆದುಕೊಂಡಿಲ್ಲ ಎನ್ನುವುದು ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ಮನವರಿಕೆ ಆಗಿದೆ.
ಇದರಿಂದ ಸಣ್ಣ ಪುಟ್ಟ ನಿರೀಕ್ಷೆ ಹುಟ್ಟಿಸಿ ಮತದಾರರನ್ನು ಸೆಳೆಯುವ ಕಾರ್ಯ ಮಾಡುವುದು ಬೇಡ. ಬೇರೆಯವರನ್ನು ತೋರಿಸಿ ನಾವು ಉತ್ತಮರು ಎನಿಸಿಕೊಳ್ಳುವುದು ಬೇಡ. ಹಿಂದೆ ನಾವು ಮಾಡಿದ ಸಾಧನೆಯನ್ನೇ ಮಾನದಂಡವಾಗಿಟ್ಟುಕೊಂಡು ಹೋಗೋಣ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಬಿಬಿಎಂಪಿ ಹಾಗೂ ವಿಧಾನಸಭೆ ಉಪಚುನಾವಣೆಗಳತ್ತ ಪಕ್ಷದ ನಾಯಕರ ಗಮನ ಹರಿದಿದೆ. ಮುಂಬರುವ ದಿನದಲ್ಲಿ ಎದುರಾಗುವ ಚುನಾವಣೆಗಳನ್ನು ಕಾಂಗ್ರೆಸ್ ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ ರಾಷ್ಟ್ರೀಯ ನಾಯಕರ ನಿರೀಕ್ಷೆ ಫಲ ಕೊಡಲಿದೆ.