ಬೆಂಗಳೂರು: ವರ್ಷದ ನಂತರ ಅಳೆದು ತೂಗಿ 5+2 ರ ಸೂತ್ರದಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಇಬ್ಬರು ವಲಸಿಗರು,ಐವರು ಮೂಲ ಬಿಜೆಪಿಗರು ಸೇರಿ ಏಳು ಶಾಸಕರು ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹೊಸ ಸಚಿವರ ಆಯ್ಕೆಗೆ ಯಾವ ಮಾನದಂಡವನ್ನು ಅನುಸರಿಸಲಾಗಿದೆ ಎನ್ನುವ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ 8 ಬಾರಿ ಶಾಸಕರಾಗಿದ್ದು, 3 ಬಾರಿ ಸಚಿವ ಸ್ಥಾನ ನಿಭಾಯಿಸಿದ ಅನುಭವ ಇದೆ.ಇದೀಗ ನಾಲ್ಕನೇ ಬಾರಿ ಸಚಿವರಾಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಕತ್ತಿ ಬೆಳಗಾವಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಹಾಗು ಸಚಿವ ರಮೇಶ್ ಜಾರಕಿಹೊಳಿ ವಿರೋಧದ ನಡುವೆಯೂ ಉಮೇಶ್ ಕತ್ತಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಟಿಕೆಟ್ ಕೂಡ ಸಹೋದರನಿಗೆ ನಿರಾಕರಿಸಿರುವುದರಿಂದ ಸಂಪುಟದಲ್ಲಿ ತಮಗೆ ಅವಕಾಶ ನೀಡಬೇಕು ಇಲ್ಲದೇ ಇದ್ದಲ್ಲಿ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪಗೆ ಕತ್ತಿ ಖಡಕ್ ಆಗಿಯೇ ಹೇಳಿದ್ದರು ಅದರ ಜೊತೆ ಇತ್ತೀಚೆಗೆ ಜನತಾ ಪರಿವಾರ ಒಂದುಗೂಡಿಸುವ ಭಾಗವಾಗಿ ಸಿಎಂ ಇಬ್ರಾಹಿಂ ಕತ್ತಿ ಅವರನ್ನು ಭೇಟಿ ಮಾಡಿದ್ದರು ಈ ಎಲ್ಲಾ ಬೆಳವಣಿಗೆಗಳು ಹಾಗು ಹಿರಿತನದ ಆಧಾರದಲ್ಲಿ ಕತ್ತಿಗೆ ಸಂಪುಟದಲ್ಲಿ ಸಿಎಂ ಸ್ಥಾನ ಕಲ್ಪಿಸಿದ್ದಾರೆ ಎನ್ನಲಾಗಿದೆ.
ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ 2 ಬಾರಿ ಸಚಿವ ಸ್ಥಾನ ಅಲಂಕರಿಸಿದ್ದು, ಮೂರನೇ ಬಾರಿಗೆ ಸಚಿವರಾಗುತ್ತಿದ್ದಾರೆ. ಲಿಂಬಾವಳಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ಪಕ್ಷದಲ್ಲಿಯೂ ಸಂಘಟನಾತ್ಮಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.ಆರ್ ಎಸ್ ಎಸ್ ಹಿನ್ನೆಲೆ ಹಾಗು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗೂ ಆಪ್ತರಾಗಿದ್ದಾರೆ.ಪಕ್ಷ ನಿಷ್ಠೆ ಹಾಗು ಸಂಘದ ಹಿನ್ನೆಲೆಯ ಕಾರಣಕ್ಕೆ ಅವರಿಗೆ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.
ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ 3 ಬಾರಿ ಶಾಸಕರಾಗಿದ್ದು, ಎರಡನೇ ಬಾರಿಗೆ ಸಂಪುಟ ಸೇರಿದ್ದಾರೆ.ಆದರೆ ನಿರಾಣಿ ಅಚ್ಚರಿ ರೀತಿಯಲ್ಲಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯ ಹರ ಸಮಾವೇಶದಲ್ಲಿ ಪಂಚಮಸಾಲಿ ಸ್ವಾಮೀಜಿ ವೇದಿಕೆಯಲ್ಲಿಯೇ ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಆಗ್ರಹಪೂರ್ವಕ ಹಕ್ಕೊತ್ತಾಯ ಮಾಡಿದ್ದರು.ಇದೀಗ ನಾಳೆ ಮತ್ತೆ ಅದೇ ಸಮಾವೇಶದಲ್ಲಿ ಸಿಎಂ ಭಾಗಿಯಾಗುತ್ತಿದ್ದಾರೆ.ಜೊತೆಗೆ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಕೂಡ ಆರಂಭಿಸಲಿದ್ದು, ಪಾದಯಾತ್ರೆಗೆ ಮುಂದಾಗಿದ್ದಾರೆ. ಇದನ್ನೆಲ್ಲಾ ನಿಯಂತ್ರಿಸಲು ನಿರಾಣಿಯನ್ನು ದಾಳವಾಗಿಸಿಕೊಳ್ಳಲು ಸಿಎಂ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಸುಳ್ಯ ಕ್ಷೇತ್ರದ ಶಾಸಕ ಅಂಗಾರ 6 ಬಾರಿ ಗೆದ್ದಿದ್ದು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.ಅಂಗಾರ ಉತ್ತಮ ಕೆಲಸಗಾರ, ಆರು ಬಾರಿ ಶಾಸಕರಾದರೂ ಅವಕಾಶ ಸಿಕ್ಕಿಲ್ಲ ಎಂದು ಬಂಡಾಯ ಎದ್ದಿಲ್ಲ, ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ, ಸಂಘ ಪರಿವಾರದ ಹಿನ್ನೆಲೆ ಹಾಗು ಪಕ್ಷ ನಿಷ್ಟೆ ಮತ್ತು ಹಿರಿತನದ ಆಧಾರದಲ್ಲಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನಾಲ್ಕು ಬಾರಿ ಶಾಸಕರಾಗಿದ್ದು, ಒಂದು ಬಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಇದೀಗ ಎರಡನೇ ಬಾರಿ ಸಚಿವರಾಗಿದ್ದಾರೆ. ಸಿ.ಪಿ ಯೋಗೇಶ್ವರ್,ಆಪರೇಷನ್ ಕಮಲದ ಚಟುವಟಿಕೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಸಚಿವ ರಮೇಶ್ ಜಾರಕಿಹೊಳಿ ಕೂಡ ಸಿಪಿವೈ ಪರ ಲಾಬಿ ನಡೆಸಿದ್ದು, ಒತ್ತಡಕ್ಕೆ ಮಣಿದ ಸಿಎಂ ಕಡೆಗೂ ತಮ್ಮ ಪ್ರಭಾವ ಬಳಸಿ ಹೈಕಮಾಂಡ್ ಅನ್ನು ಒಪ್ಪಿಸಿ ಯೋಗೇಶ್ವರ್ ಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ. ಸರ್ಕಾರ ಬರಲು ರಾಜೀನಾಮೆ ಕೊಟ್ಟು ಬಂದವರ ಕೊಡುಗೆಯ ರೀತಿಯಲ್ಲೇ ಯೋಗೇಶ್ವರ್ ಕೂಡ ರಾಜೀನಾಮೆ ಕೊಟ್ಟು ಬಂದವರು ಮತ್ತು ಬಿಜೆಪಿ ನಡುವೆ ಸೇತುವೆಯಾಗಿ ಕೆಲಸ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಮಾನ್ಯತೆ ಸಿಕ್ಕಿದೆ ಎನ್ನಲಾಗಿದೆ.
ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮೂರು ಬಾರಿ ಶಾಸಕರಾಗಿದ್ದು ಉಪ ಚುನಾವಣೆಯಲ್ಲಿ ಪರಾಜಿತಗೊಂಡು ಪರಿಷತ್ ಸದಸ್ಯರಾಗಿದ್ದು ಸಚಿವರಾಗಿದ್ದಾರೆ. ವಲಸಿಗರ ಕೋಟಾದಲ್ಲಿ ಸಚಿವರಾಗಿದ್ದಾರೆ. ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿದ ಕಾರಣದಿಂದ ಚುನಾವಣೆಯಲ್ಲಿ ಸೋಲಬೇಕಾಯಿತು.ಆದರೂ ಕೊಟ್ಟ ಮಾತಿನಂತೆ ಮಂತ್ರಿ ಮಾಡುವ ಭರವಸೆ ನೀಡಿದ್ದ ಸಿಎಂ, ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನ ಕಲ್ಪಿಸಿದ್ದಾರೆ.
ಪರಿಷತ್ ಸದಸ್ಯ ಆರ್.ಶಂಕರ್ ಮೊದಲ ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ರಾಜೀನಾಮೆ ನೀಡಿ ಇದೀಗ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಮೊದಲ ಬಾರಿ ಸಚಿವರಾಗುತ್ತಿದ್ದಾರೆ.ರಾಣೆಬೆನ್ನೂರು ಉಪ ಚುನಾವಣೆಯಿಂದ ಪಕ್ಷದ ಸೂಚನೆಯಂತೆ ಸ್ಪರ್ಧೆ ಮಾಡಿರಲಿಲ್ಲ. ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನ ಕೊಡುವ ಭರವಸೆಯನ್ನು ಸಿಎಂ ನೀಡಿದ್ದರು ಅದರಂತೆ ಪರಿಷತ್ ಸ್ಥಾನ ನೀಡಿ ಈಗ ಸಚಿವ ಸ್ಥಾನವನ್ನು ನೀಡಲಾಗಿದೆ.