ಬೆಂಗಳೂರು: ಇಂದು(ಸೋಮವಾರ) ಬೆಳಗ್ಗೆ 10 ಗಂಟೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. 11 ಗಂಟೆಯ ನಂತರ ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿತ್ತು.
ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಅಧಿಕಾರಿಗಳು ಮಾಧ್ಯಮಗೋಷ್ಟಿ ನಡೆಸಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. 11 ಗಂಟೆಯಿಂದ ಇಲಾಖೆಯ ಅಂತರ್ಜಾಲದಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು www.karresults.nic.in ಅಂತರ್ಜಾಲ ಸಂಪರ್ಕಿಸಿ.
ಏಪ್ರಿಲ್ 24 ರಿಂದ ಮೌಲ್ಯಮಾಪನ ಕಾರ್ಯ ನಡೆದಿತ್ತು. ರಾಜ್ಯಾದ್ಯಂತ 236 ಕೇಂದ್ರಗಳಲ್ಲಿ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗಿದೆ. 73 ಸಾವಿರಕ್ಕೂ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಲಾಗಿತ್ತು.
ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆದ ಪರೀಕ್ಷೆಗೆ ಒಟ್ಟು 15,498 ಶಾಲೆಗಳಿಂದ ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರು. ಇದರಲ್ಲಿ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು ಹಾಗು 6,060 ಅನುದಾನಿರಹಿತ ಶಾಲೆಗಳಿಂದ ಒಟ್ಟು 8,42,811 ವಿದ್ಯಾರ್ಥಿಗಳು ಇದ್ದರು. ಅದರಲ್ಲಿ 7,94,611 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವ ಶಾಲಾ ವಿದ್ಯಾರ್ಥಿಗಳಾಗಿದ್ದು, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನ 301 ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನ 15 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಇದ್ದರು.
1,845 ಕ್ಲಸ್ಟರ್ ಪರೀಕ್ಷಾ ಕೇಂದ್ರ, 1,354 ನಾನ್ ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು, 106 ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 3,60,862 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, 2,20,831 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು, 2,61,118 ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ: ನೀಟ್ ಪರೀಕ್ಷೆ ಬರೆದ 1.34 ಲಕ್ಷ ವಿದ್ಯಾರ್ಥಿಗಳು