ಬೆಂಗಳೂರು: ಕೊರೊನಾ ವೈರಸ್ ಕಾರಣಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯನ್ನೇ ಬದಲಾಯಿಸುವ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಇದೀಗ ಫಲಿತಾಂಶ ಪ್ರಕಟಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ: ಫಲಿತಾಂಶ ಪ್ರಕಟಿಸುವ ವಿಚಾರ ಕುರಿತು ಇಂದು ಇಲಾಖೆಯಲ್ಲಿ ಸಭೆ ನಡೆಯಲಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಎಸ್ಎಸ್ಎಲ್ ಸಿ ಫಲಿತಾಂಶ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ. ಈ ಹಿಂದೆಯೇ ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಈ ಹಿಂದಿನ ಸಚಿವರು ತಿಳಿಸಿದರು. ಹೀಗಾಗಿ ಇದರ ತಯಾರಿಯಲ್ಲಿರುವ ಶಿಕ್ಷಣ ಇಲಾಖೆ ನಾಳೆಯೇ ಅಂದರೆ ಆಗಸ್ಟ್ 7 ರಂದೇ ಫಲಿತಾಂಶ ಪ್ರಕಟ ಮಾಡುವುದು ಬಹುತೇಕ ಖಚಿತವಾಗಿದೆ.
ಪ್ರಧಾನ ಕಾರ್ಯದರ್ಶಿಗಳ ಆದೇಶವೊಂದೇ ಬಾಕಿ ಇದ್ದು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೂನ್ 19-22 ರಂದು ಪರೀಕ್ಷೆ ನಡೆದಿದ್ದು, 99.65% ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಸಿಎಂ ಜೊತೆ ಚರ್ಚಿಸಿ ನಾಳೆಯೇ ಫಲಿತಾಂಶ ಪ್ರಕಟಿಸಲು ಚಿಂತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಕೊರೊನಾ ಕಾರಣಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನ ಓಎಂಆರ್ ಮಾದರಿಯಲ್ಲಿ ನಡೆಸಿದ್ದು, ಸಂಪೂರ್ಣ ಕಂಪ್ಯೂಟರೈಸ್ಡ್ ಮೌಲ್ಯಮಾಪನ ಮಾಡಲಾಗುತ್ತಿದೆ. ಈ ಹಿಂದೆ ಸಚಿವರು ಹೇಳಿದಂತೆ ಆಗಸ್ಟ್ 10 ರೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಇದನ್ನೂ ಓದಿ : ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್
ಆರು ವಿಷಯಗಳ ಪರೀಕ್ಷೆಯು ಕೇವಲ ಎರಡು ದಿನದಲ್ಲಿ ಪೂರ್ಣವಾಗಿದ್ದು ತಲಾ 40 ಅಂಕಗಳ 120 ಅಂಕಗಳ ಎರಡು ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿ ಪಡೆದ ಅಂಕ ದ್ವಿಗುಣಗೊಳಿಸಿ ಒಟ್ಟು ಅಂಕದ ಮೂಲಕ ಫಲಿತಾಂಶ ಪ್ರಕಟ ಮಾಡಲಾಗುತ್ತದೆ. ಪರೀಕ್ಷೆ ಬರೆದವರನ್ನ ಯಾರನ್ನೂ ಫೇಲ್ ಮಾಡದೇ ಎಲ್ಲರೂ ಪಾಸ್ ಅಂತ ಈಗಾಗಲೇ ಘೋಷಿಸಲಾಗಿದೆ. ಅಂಕ ತೃಪ್ತಿಕರವಾಗಿಲ್ಲದಿದ್ದರೆ ಪಿಯುಸಿ ಮಾದರಿಯಲ್ಲಿ ಮಕ್ಕಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಬಹುದು ಎಂದರು.
ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ: ಎಸ್ಎಸ್ಎಲ್‌ಸಿ ಫಲಿತಾಂಶವನ್ನ ವಿದ್ಯಾರ್ಥಿಗಳಿಗೆ ನೋಂದಾಯಿತ ಮೊಬೈಲ್ ನಂಬರ್‌ಗೆ ಎಸ್ಎಂಎಸ್ ಮೂಲಕ ಸಂದೇಶ ರವಾನೆಯಾಗಲಿದೆ. ಹಾಗೇ ಬೋರ್ಡ್ ನ ಅಧಿಕೃತ ವೆಬ್ ಸೈಟ್ ಆದ www.sslc.kar.nic.in ಅಥವಾ karresults.nic.in ಫಲಿತಾಂಶ ಲಭ್ಯವಿರಲಿದೆ.