ಬೆಂಗಳೂರು: ಕೊರೊನಾ ಸಾಂಕ್ರಾಮಿಕ ವೈರಸ್ ಕಾರಣಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯನ್ನೇ ಬದಲಾಯಿಸಲಾಯಿತು. ಪರೀಕ್ಷೆ ಕುರಿತು ಸಾಕಷ್ಟು ವಾದ- ವಿವಾದಗಳ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯ್ತು. ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದ್ದು, ಬಹು ಆಯ್ಕೆ ಪ್ರಶ್ನೋತ್ತರಗಳನ್ನ ಕೇಳಲಾಗಿತ್ತು. ಇತ್ತ ಉತ್ತರ ಪತ್ರಿಕೆಗಳೆಲ್ಲವೂ ಒಎಂಆರ್ ಆಗಿದ್ದು, ಈ ಬಾರಿ ಬಹು ಬೇಗವೇ ಫಲಿತಾಂಶ ವಿದ್ಯಾರ್ಥಿಗಳ ಕೈ ಸೇರಲಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕರಾಗಿರುವ ಸುಮಂಗಲ, ಸಚಿವರು ತಿಳಿಸಿರುವಂತೆ ಆಗಸ್ಟ್ 10ರೊಳಗೆ ಮೌಲ್ಯಮಾಪನ ಕಾರ್ಯ ಮುಗಿಸಲಾಗುವುದು. ಈಗಾಗಲೇ ಡಿಜಿಟಲ್ ಸ್ಕ್ಯಾನಿಂಗ್ ವ್ಯಾಲುವೇಷನ್ ಪ್ರಕ್ರಿಯೆ ಶುರುವಾಗಿದೆ ಎಂದರು.
ಇನ್ನು ಈ ಹಿಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ಕನಿಷ್ಠ 1 ತಿಂಗಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಒಎಂಆರ್ ಶೀಟ್ ಉತ್ತರಪತ್ರಿಕೆ ಕಾರಣಕ್ಕೆ 15 ದಿನಗಳಲ್ಲಿ ವ್ಯಾಲುವೇಷನ್ ಪ್ರಕ್ರಿಯೆ ಮುಗಿಯಲಿದೆ. ಇತ್ತ ಆಯಾ ಜಿಲ್ಲೆಯಲ್ಲಿ ಮೌಲ್ಯಮಾಪನ ನಡೀತಿದ್ಯಾ, ಎಲ್ಲೆಲ್ಲಿ ಮೌಲ್ಯಮಾಪನ ಕೆಲಸ ಆಗ್ತಿದೆ ಎಂಬ ಗುಟ್ಟನ್ನು ಬೋರ್ಡ್ ಬಿಟ್ಟು ಕೊಟ್ಟಿಲ್ಲ.
ಸದ್ಯ, ಮೂರು ವಿಷಯ ಆಧರಿಸಿ ಎರಡು ಪ್ರಶ್ನೆ ಪತ್ರಿಕೆಗಳನ್ನು ನೀಡಿ, ಕಳೆದ ಜುಲೈ 19-22 ರಂದು ಪರೀಕ್ಷೆ ಮುಗಿದಿದೆ. ಇನ್ನು ಪರೀಕ್ಷೆಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಅಂತ ಸಚಿವರು ಸಹ ತಿಳಿಸಿದ್ದು, ದುಡ್ಡು ಕೊಟ್ಟರೆ ಪಾಸ್ ಮಾಡ್ತೀವಿ ಅಂತ ಹೇಳುವ ದಂಧೆಕೋರರ ಬಗ್ಗೆ ಎಚ್ಚರದಿಂದ ಇರಿ.
ಅಧಿಕೃತ ವೆಬ್ ಸೈಟ್ನಲ್ಲಿ ಫಲಿತಾಂಶ:
ಎಸ್ಎಸ್ಎಲ್ಸಿ ಫಲಿತಾಂಶವನ್ನು ಆಗಸ್ಟ್ 10ರ ಆಸುಪಾಸಿನೊಳಗೆ ಪ್ರಕಟ ಮಾಡಲಾಗುವುದೆಂದು ತಿಳಿಸಿದ್ದು, ವಿದ್ಯಾರ್ಥಿಗಳಿಗೆ ಫಲಿತಾಂಶ ನೋಂದಾಯಿತ ಮೊಬೈಲ್ ನಂಬರ್ಗೆ ಎಸ್ಎಂಎಸ್ ಮೂಲಕ ಸಂದೇಶ ರವಾನೆಯಾಗಲಿದೆ. ಹಾಗೇ ಬೋರ್ಡ್ನ ಅಧಿಕೃತ ವೆಬ್ಸೈಟ್ ಆದ www.sslc.kar.nic.in ಅಥವಾ karresults.nic.in ಫಲಿತಾಂಶ ಲಭ್ಯವಿರಲಿದೆ.