ಬೆಂಗಳೂರು: ಅಧಿಕಾರ ಕಳೆದುಕೊಂಡು ಹತಾಶರಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏನೆನೋ ಮಾತನಾಡುತ್ತಿದ್ದಾರೆ. ಒಂದು ವೇಳೆ ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಸಾಬೀತಾದರೇ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡುತ್ತೇನೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ಹಾಗೂ ಸಚಿವ ಸಂಪುಟಕ್ಕೆ ಕೋವಿಡ್ ನಿಯಂತ್ರಣ ಬಹುದೊಡ್ಡ ಸವಾಲಾಗಿದೆ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ. ಪ್ರತಿಪಕ್ಷದ ನಾಯಕರು ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ಅವ್ಯವಹಾರ ಆರೋಪ ಸಾಬೀತಾದರೆ ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದರು.
ಕೊರೊನಾದಂತಹ ಪರಿಸ್ಥಿತಿಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಕೋವಿಡ್-19 ಇವತ್ತು ಸಿಎಂಗೆ ಹಾಗೂ ಸಂಪುಟದ ಸಚಿವರಿಗೆ ಸವಾಲಾಗಿದೆ. ನಾನು ಜನರಿಗೆ ಮನವಿ ಮಾಡುತ್ತೇನೆ. ಡಿಮ್ಯಾಂಡ್ ಇಲ್ಲದಿದ್ದಾಗ ಸರಬರಾಜು ಮಾಡುವವರು ಕಡಿಮೆ ಇರುತ್ತದೆ. ಡಿಮ್ಯಾಂಡ್ ಹೆಚ್ಚಾದಾಗ ಉತ್ಪಾದನೆ ಹೆಚ್ಚಾಗುತ್ತದೆ. ಆದಾದ ಬಳಿಕ ಹಣ ಕಡಿಮೆ ಆಗುತ್ತದೆ. ಈಗ ಜನ ಕೇಳುತ್ತಿದ್ದಾರೆ. ಪ್ರತಿಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಉಪಕರಣ ಖರೀದಿಯಲ್ಲಿ 2,200 ಕೋಟಿ ರೂ. ಅಕ್ರಮ ನಡೆದಿದೆ ಎನ್ನುತ್ತಿದ್ದಾರೆ. ಇದೆಲ್ಲವೂ ಸುಳ್ಳು ಆರೋಪ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ವೆಂಟಿಲೇಟರ್ ತಾಂತ್ರಿಕತೆಯ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ನಿಂದ 50-60 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆ ಆಧಾರದ ಮೇಲೆ ಮಾತ್ರ ವೆಂಟಿಲೇಟರ್ ಖರೀದಿಸಿಲ್ಲ. ಅದೇ ರೀತಿ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ 18 ಲಕ್ಷ ವೆಚ್ಚ ತಗುಲಿದೆ ಎಂದು ಮಾಹಿತಿ ನೀಡಿದರು.
ವೆಂಟಿಲೇಟರ್ ಒಂದರಲ್ಲೇ 120 ಕೋಟಿ ರೂ. ಅವ್ಯವಹಾರ ನಡೆದಿದೆಯೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಈವರೆಗೂ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್ ಖರೀದಿಯಾಗಿದೆ. ಪಿಪಿಇ ಕಿಟ್ಗಳಿಗೆ 48.65 ಕೋಟಿ ಆಗಬೇಕಿತ್ತು. ಆದರೆ, ಪಿಪಿಇ ಕಿಟ್‌ನಲ್ಲೂ ಕೆಲವೊಂದು ಕಾಂಪೋನೆಂಟ್ ಇರುತ್ತದೆ ಎಂದು ಹೇಳಿದರು. ಇಡೀ ದೇಶದಲ್ಲಿ ಕೊರೊನಾಗೆ ಮೊದಲ ಸಾವು ಸಂಭವಿಸಿದ್ದು ಕಲಬುರಗಿ ಜಿಲ್ಲೆಯಲ್ಲಿ. ನಾನು ಎರಡು ದಿನ ಅಲ್ಲೇ ಇದ್ದು, ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಕಿಟ್ ಕೊಟ್ಟರೇ ಆಗಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಕಿಟ್ ಬೇಕು ಎಂದರು. ಅದನ್ನು ತಯಾರಿಸಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರಿಸಲು ಆರ್ಡರ್ ಪ್ಲೇಸ್ ಮಾಡಿದ್ದೆವು. ಈವರೆಗೂ ಅದು 40 ಸಾವಿರ ಕಿಟ್ ಮಾತ್ರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಾವು ತುಂಬಾ ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಕಿಟ್ ಬೇಕು ಅಂದರು. ಚೀನಾ, ಸಿಂಗಾಪುರ್‌ನಿಂದ ಕಿಟ್ ಖರೀದಿ ಮಾಡಿದ್ದೇವೆ. 3 ಕಂಪನಿಗಳಿಂದ 10 ಲಕ್ಷ ಕಿಟ್ ಖರೀದಿಸಿದ್ದೇವೆ. ಮೊದಲು ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ. ಈವರೆಗೂ 9 ಲಕ್ಷದ 65 ಸಾವಿರ ಖರೀದಿ ಮಾಡಿದ್ದೇವೆ. ಪಿಪಿಇ ಕಿಟ್‌ಗೆ 79,35,16,816 ರೂ. ಖರ್ಚಾಗಿದೆ. ಇದರಲ್ಲಿ 150 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಎಲ್ಲಿ ನಡೆದಿದೆ ಅವ್ಯವಹಾರ ಎಂದು ಸಚಿವ ಶ್ರೀರಾಮುಲು ಪ್ರಶ್ನಿಸಿದರು.
ಎನ್- 95 ಮಾಸ್ಕ್ ಅನ್ನು 156 ರೂಪಾಯಿಗೆ ಖರೀದಿಸಿದ್ದೇವೆ. ಬೇರೆ ಕಡೆಗಳಿಂದ ಒಟ್ಟು ಎನ್- 95 ಮಾಸ್ಕ್ ಖರೀದಿಗೆ 11,51,58,226 ರೂ. ಖರ್ಚಾಗಿದೆ. ಸರ್ಜಿಕಲ್ ಗ್ಲೌಸ್‌ನಲ್ಲೂ ಅವ್ಯವಹಾರ ಅಂತಾರೆ. ಸರ್ಜಿಕಲ್ ಗ್ಲೌಸ್‌ಗೆ ಕೇರಳದ ಕಂಪನಿಯಿಂದ 8 ರೂ. 10 ಪೈಸೆಗೆ ಕೊಡುತ್ತೇವೆ ಅಂದಿದ್ದರು. ಅದರೆ ಅವರು ನಮಗೆ ಕೊಡಲಿಲ್ಲ. ಬೆಂಗಳೂರಿನ ಕಂಪನಿಯೊಂದಕ್ಕೆ ಆರ್ಡರ್ ಕೊಟ್ಟಿದ್ದೇವೆ. ಒಂದು ಗ್ಲೌಸ್ 9 ರೂ. 50 ಪೈಸೆಗೆ ಕೊಡುತ್ತೇನೆ ಅಂದರು. ನಾವು ಅವರಿಗೆ 3 ಲಕ್ಷ ಗ್ಲೌಸ್ ಆರ್ಡರ್ ಕೊಟ್ಟಿದ್ದೇವೆ. 50 ಸಾವಿರ ಗ್ಲೌಸ್ ಮಾತ್ರ ಕೊಟ್ಟಿದ್ದಾರೆ. ಸರ್ಜಿಕಲ್ ಗ್ಲೌಸ್ ಈವರೆಗೂ 30 ಸಾವಿರ ತೆಗೆದುಕೊಂಡಿದ್ದೇವೆ. 28 ಲಕ್ಷದ 50 ಸಾವಿರ ರೂ.ಗೆ ಮಾತ್ರ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು, ವಿಪಕ್ಷಗಳ ಆರೋಪಗಳಿಗೆ ಸರ್ಕಾರ ಸ್ಪಷ್ಟವಾಗಿ ಉತ್ತರ ಕೊಡುತ್ತೇವೆ. ಯಾವುದನ್ನು ಮರೆಮಾಚುತ್ತಿಲ್ಲ. ರಾಜ್ಯದ ಜನರು ಜನ ಬೀದಿಯಲ್ಲಿ ಮಾತಾಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಈ ಬಗ್ಗೆ ಉತ್ತರ ನೀಡುತ್ತಿದ್ದೇವೆ. ಪ್ರತಿಪಕ್ಷದ ನಾಯಕರು ಕೋವಿಡ್ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪ ಬಹಳ ದೂರ ಇದೆ. ಇದಕ್ಕೆ ಸ್ಪಷ್ಟನೆ ನೀಡಲು ಇಂದು ಸಚಿವ ಶ್ರೀರಾಮುಲು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿಮ್ಮ ಮುಂದೆ ಬಂದಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾತನಾಡಿ, ಮಾರ್ಚ್ ನಲ್ಲಿ ಪ್ರಕ್ಯೂರ್ಮೆಂಟ್ ನಿಂದ ಆರಂಭ ಮಾಡಿದ್ದು, ಟೋಟಲ್ ಡ್ರಗ್ಸ್, ಮತ್ತು ಇಕ್ವಿಮೆಂಟ್ಸ್ 290 ಕೋಟಿ ರೂ. ಕೊಟ್ಟು ತೆಗೆದುಕೊಂಡೆದ್ದೇವೆ. ಪಿಪಿಇ ಕಿಟ್ ಮಾರ್ಚ್ ನಲ್ಲಿ ಇರಲಿಲ್ಲ ಎಂದರು. ಖಾಸಗಿ ಕಂಪನಿಯಿಂದ 5.6 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಮೂರು ರೀತಿಯ ವೆಂಟಿಲೇಟರ್ ಗಳನ್ನು ಖರೀದಿ ಮಾಡಲಾಗಿದೆ. 2100 ವೆಂಟಿಲೇಟರ್ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಇದುವರೆಗೆ 740 ಮಾತ್ರ ಪೂರೈಕೆಯಾಗಿವೆ ಎಂದು ತಿಳಿಸಿದರು.
ಸ್ಯಾನಿಟೈಸರ್ ಪರ್ ಲೀಡರ್ ಗೆ ಮಿನಿಸ್ಟರ್ ಆಫ್ ಕನ್ಸುಮರ್ ನಿಂದ ನಿಗದಿ ಮಾಡಿತ್ತು. 500 ಎಂಎಲ್ ಗೆ 250 ರೂ. ರೂ. ಕೊಟ್ಟು ಖರೀದಿಸಲಾಗಿತ್ತು. ಮಾರ್ಚ್ ನಲ್ಲಿ ನಮಗೆ ಸರಿಯಾಗಿ ಸರಬರಾಜು ಇರಲಿಲ್ಲ ಎಂದರು.