ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಆಗ್ರಹಿಸಿ ಹಾಗೂ ಗಾಂಧಿ ಜಯಂತಿ ಅಂಗವಾಗಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಿಂದ ಇಂದು ನಡೆದ 'ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ' ಪಾದಯಾತ್ರೆ ಯಶಸ್ವಿಯಾಯಿಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ‌್ ಹೇಳಿದರು.
ಇಂದು ಎಸ್ಆರ್ಪಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯ ಪ್ರಾರಂಭಕ್ಕೆ ಮುಂಚೆ ಅನಗವಾಡಿ ಗ್ರಾಮದ ಬಳಿರುವ ಬಿ. ಎನ್. ಖೋತ್ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಗದಗದ ತೋಂಟದಾರ್ಯ ಸ್ವಾಮೀಜಿಗಳು, ಇಲಕಲ್ಲ ವಿಜಯ ಮಹಾಂತ ಶ್ರೀಗಳು, ಭೋವಿ ಮಠದ ಶ್ರೀಗಳು ಸೇರಿದಂತೆ ಜಿಲ್ಲೆಯ 20ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಪ್ಪಾರ್ಪಣೆ ನೆರವೇರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಯುಕೆಪಿ 3ನೇ ಹಂತದ ಕಾಮಗಾರಿ ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸಿ ಘಟಪ್ರಭಾ ನದಿಯಿಂದ ಕೃಷ್ಣಾ ನದಿವರೆಗೆ ಸುಮಾರು 20 ಕಿ.ಮೀ ವರೆಗೂ ಪಾದಯಾತ್ರೆ ನಡೆಸಲಾಯಿತು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು. ಸುಗಣ, ಬೀಳಗಿ ಕ್ರಾಸ್, ಬಾಡಗಂಡಿ ಗ್ರಾಮದ ಮೂಲಕ ಕೋಲಾರ ಕೃಷ್ಣಾ ಸೇತುವೆ ಬಳಿರುವ ಟಕ್ಕಳಕಿ ಕ್ರಾಸ್ ಬಳಿ ಪಾದಯಾತ್ರೆ ಅಂತ್ಯಗೊಳಿಸಲಾಯಿತು.
40 ಲಕ್ಷ ರೂ. ಪರಿಹಾರ ನೀಡಿ : ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಆರ್. ಪಾಟೀಲ್ ಮಾತನಾಡಿ, ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಗೋವಿಂದ ಕಾರಜೋಳ ಅವರು, ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರತಿ ಎಕರೆಗೆ 40 ಲಕ್ಷ ರೂ. ಪರಿಹಾರ ಧನ ನೀಡುವಂತೆ ಆಗ್ರಹಿಸಿದ್ದರು. ಈಗ ಕಾರಜೋಳ ಅವರೇ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಅವರದೇ ಸರ್ಕಾರದ ಇದೆ, ಪ್ರತಿ ಏಕರೆ 40 ಲಕ್ಷ ರೂ. ಪರಿಹಾರ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಉತ್ತರ ಕರ್ನಾಟಕದವರಾಗಿದ್ದು, ನೀರಾವರಿ ಯೋಜನೆ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಇದು ಯಾವ ಪಕ್ಷದ ವಿರುದ್ಧದ ಪ್ರತಿಭಟನೆಯಲ್ಲ. ಬದಲಿಗೆ, ಪ್ರತೀ ವರ್ಷ ಮುಳುಗಡೆ ಸಮಸ್ಯೆ ಎದುರಿಸುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ. 3ನೇ ಹಂತದ ಯೋಜನಾ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಹಾಗು ಏಳು ಜಿಲ್ಲೆಯ 13 ಲಕ್ಷದ 50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಗೊಳಿಸಲು ನಡೆಸಿದ ಪಾದಯಾತ್ರೆ ಎಂದು ತಿಳಿಸಿದರು.
ಇದುವರೆಗೂ ಯಾವುದೇ ಅಭಿವೃದ್ಧಿಯಾಗಿಲ್ಲ: ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಮಹತ್ತರ ನೀರಾವರಿ ಯೋಜನೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ದಕ್ಷಿಣ ಕನ್ನಡ ಜನಪ್ರತಿನಿಧಿಗಳ ಮಾದರಿಯಂತೆ ಉತ್ತರ ಕರ್ನಾಟಕ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತಿಲ್ಲ. ಈವರೆಗೆ ಉತ್ತರ ಕರ್ನಾಟಕದ ಏಳು ಜನ ನೀರಾವರಿ ಸಚಿವರಾಗಿದ್ದಾರೆ. ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ. ಇದು ದುರ್ದೈವದ ಸಂಗತಿ. ಆದರೆ ಕೃಷ್ಣಾ ನದಿ ಅಭಿವೃದ್ಧಿ ಆಗಬೇಕಾದರೆ ಒಂದು ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹೀಗಾಗಿ ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ಮಾಡುವುದು ಅಗತ್ಯವಿದೆ ಎಂದು ಹೇಳಿದರು.