ಬೆಂಗಳೂರು : ಬಿಐಎಎಲ್ನ ಸಂಚಾರಿ ಕ್ಯಾಬಿನ್‍ಗಳು ನಗರ ಪೊಲೀಸ್ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ ನೀಡುವುದಲ್ಲದೇ, ವಿಶ್ರಾಂತಿಗಾಗಿ ಸ್ಥಳಾವಕಾಶ ಪೂರೈಸಲಿವೆ. ಯೋಜನಾತ್ಮಕವಾಗಿ ಏಳು ಪ್ರಮುಖ ಸ್ಥಳಗಳಲ್ಲಿ ಇವುಗಳನ್ನು ಇರಿಸಲಾಗುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಸಂಸ್ಥೆಯು, ನಗರ ಪೊಲೀಸರಿಗೆ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಉಪಕ್ರಮದ ಅಡಿ ಏಳು ಸಂಚಾರಿ ಕ್ಯಾಬಿನ್‍ಗಳನ್ನು ದಾನವಾಗಿ ನೀಡಿದೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಬೆಂಬಲದೊಂದಿಗೆ ಈ ಅನನ್ಯ ಚಿಂತನೆಯ ಉಪಕ್ರಮವನ್ನು ರೂಪಿಸಲಾಗಿತ್ತು.
ಈ ಕ್ಯಾಬಿನ್‍ಗಳನ್ನು ನಗರದ ಯೋಜನಾತ್ಮಕವಾಗಿ ಸ್ಥಳಗಳಲ್ಲಿ ಇರಿಸಿದ್ದು, ಪೊಲೀಸ್ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ ನೀಡುವುದಲ್ಲದೇ ಜನದಟ್ಟಣೆಯ ಅವಧಿಗಳಲ್ಲಿ ಸರಾಗವಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ನಾಗರಿಕರು ಪೊಲೀಸರೊಂದಿಗೆ ಸುಲಭವಾಗಿ ಸಂಪರ್ಕ ಹೊಂದುವ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಇವುಗಳನ್ನು ದಾನವಾಗಿ ನೀಡಲಾಗಿದೆ.
ಪ್ರತಿ ಕ್ಯಾಬಿನ್‍ನಲ್ಲಿ ಸಭೆ ನಡೆಸುವ ಪ್ರದೇಶ ಇದ್ದು, ಜೊತೆಗೆ ನಾಲ್ಕು ಬಂಕರ್ ಬೆಡ್‍ಗಳು ಮತ್ತು ವಾಷ್‍ರೂಮ್ ಇರುತ್ತವೆ. ಸುಧಾರಿಸಿಕೊಂಡು ಚೇತರಿಕೆಯೊಂದಿಗೆ ಕರ್ತವ್ಯಕ್ಕೆ ಮರಳಲು ಪೊಲೀಸ್ ಸಿಬ್ಬಂದಿಗೆ ಇವು ಸಹಾಯ ಮಾಡಲಿವೆ. ಈ ಕ್ಯಾಬಿನ್‍ಗಳು ವಿದ್ಯುತ್ ಮಿತವ್ಯಯದ ಎಲ್‍ಇಡಿ ದೀಪಗಳು, ಸೀಲಿಂಗ್ ಫ್ಯಾನ್‍ಗಳು, ಎಲೆಕ್ಟ್ರಿಕ್ ಸಾಕೆಟ್‍ಗಳಿಂದ ಚಾಲಿತವಾಗಿವೆ.
ಓದಿ: ಬಂದ್ ಎಫೆಕ್ಟ್: ಚಾಮರಾಜನಗರ ಕೆಎಸ್ಆರ್ಟಿಸಿಗೆ 20 ಲಕ್ಷ ರೂ. ನಷ್ಟ
ಏರ್ ಕಂಡಿಷನಿಂಗ್ ಕೂಡ ಇದರಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಮೇಲ್ಭಾಗದಲ್ಲಿ 300 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇರುತ್ತದೆ. ಜೊತೆಗೆ ಅಡುಗೆ ಮನೆಗೆ ಕೂಡ ಸ್ಥಳಾವಕಾಶ ಮಾಡಿಕೊಡಲಾಗಿರುತ್ತದೆ. ಬಿಐಎಎಲ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವು ಸಮಾಜಕ್ಕೆ ಮೌಲ್ಯವರ್ಧನೆ ನೀಡುವಂತಹ, ಮೂಲಸೌಕರ್ಯ ಸೃಷ್ಟಿಸುವತ್ತ ಗಮನ ಹರಿಸಿದೆ.
ಜೊತೆಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯೊಂದಿಗೆ ದೀರ್ಘಕಾಲೀನ ಸಹಯೋಗವನ್ನು ಇದು ಹೊಂದಿರುತ್ತದೆ. ಸಮುದಾಯಗಳನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸರಾಗವಾಗಿಸುವುದಕ್ಕಾಗಿ ಪೊಲೀಸರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ಚಿಂತನೆ ರೂಪಿಸಲಾಗಿದೆ.
ಇದೇ ವರ್ಷ ಆರಂಭದಲ್ಲಿ ಬಿಐಎಎಲ್ ಸಂಸ್ಥೆಯು ಕೆಎಸ್ಆರ್ಟಿಸಿ ಸಹಯೋಗದಲ್ಲಿ ಜಂಟಿಯಾಗಿ ಪ್ರಶಸ್ತಿ ವಿಜೇತ`ಸ್ತ್ರೀ ಟಾಯ್ಲೆಟ್’ನ ಅನಾವರಣಗೊಳಿಸಿತ್ತು. ಸೇವೆಯಲ್ಲಿ ಇರದ ಬಸ್‍ವೊಂದನ್ನು ಈ ಕಾರ್ಯಕ್ಕಾಗಿ ಪರಿವರ್ತಿಸುವ ಚಿಂತನೆಯ ಫಲ ಇದಾಗಿತ್ತು.
ಈ ಶೌಚಾಲಯವನ್ನು ಪ್ರಸ್ತುತ ಕೆಂಪೇಗೌಡ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಇದರಲ್ಲಿ ಮೂರು ಭಾರತೀಯ ಮತ್ತು ಎರಡು ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳಿರುತ್ತವೆ. ಸೌರಶಕ್ತಿ ಚಾಲಿತ ಸ್ವಯಂ-ವಿದ್ಯುತ್ ಉತ್ಪಾದನೆಯನ್ನು ಈ ಬಸ್ ಬಳಸಿಕೊಳ್ಳುತ್ತದೆ.