ಲಕ್ನೋ(ಉತ್ತರ ಪ್ರದೇಶ): ಹಿಂಸಾಚಾರಪೀಡಿತ ಸಂಭಾಲ್ಗೆ ನಾಳೆ (ಬುಧವಾರ) ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶದ ಇತರೆ ಪಕ್ಷಗಳ ಐವರು ಸಂಸದರು ಭೇಟಿ ನೀಡಲು ಮುಂದಾಗಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಮಾಹಿತಿ ನೀಡಿದರು.
ಸಂಭಾಲ್ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಈ ನಿಷೇಧಾಜ್ಞೆ ಭಾನುವಾರ ಅಂತ್ಯಗೊಂಡಿದೆ. ಇದೀಗ ಮತ್ತೆ ಡಿಸೆಂಬರ್ 31ರವರೆಗೂ ವಿಸ್ತರಿಸಲಾಗಿದ್ದು, ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ನವೆಂಬರ್ 19ರಂದು ಕೋರ್ಟ್ ಅನುಮತಿ ಮೇರೆಗೆ ಮೊಘಲ್ ಕಾಲದ ಇಲ್ಲಿನ ಮಸೀದಿಯಿದ್ದ ಜಾಗದ ಸಮೀಕ್ಷೆಗೆ ಅಧಿಕಾರಿಗಳು ಮುಂದಾದಾಗ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮಸೀದಿ ಕಟ್ಟಿದ ಜಾಗದಲ್ಲಿ ಹಿಂದೆ ದೇವಾಲಯವಿತ್ತು, ಈ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದರ ಆಧಾರದ ಮೇರೆಗೆ ಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ನವೆಂಬರ್ 24ರಂದು ಎರಡನೇ ಬಾರಿ ಸಮೀಕ್ಷೆಗೆ ಮುಂದಾದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.
ಸಮಾಜವಾದಿ ಪಕ್ಷದ ನಿಯೋಗವನ್ನು ತಡೆದಿದ್ದ ಪೊಲೀಸರು: ಸಂಭಾಲ್ ಹಿಂಸಾಚಾರ ಕುರಿತು ವರದಿಗೆ ಹೊರಟಿದ್ದ 15 ಸದಸ್ಯರ ತಂಡದ ಸಮಾಜವಾದಿ ಪಕ್ಷದ ನಿಯೋಗವನ್ನು ನವೆಂಬರ್ 30ರಂದು ಉತ್ತರ ಪ್ರದೇಶ ಪೊಲೀಸರು ಲಕ್ನೋದಲ್ಲಿ ತಡೆದಿದ್ದರು. ಈ ಕ್ರಮವನ್ನು ಸಮಾಜವಾದಿ ಪಕ್ಷ ತೀವ್ರವಾಗಿ ಖಂಡಿಸಿತ್ತು. ಎಸ್ಪಿ ನಾಯಕ ಅಖಿಲೇಶ್ ಯಾದವ್, ಇದು ಸರ್ಕಾರದ ವೈಫಲ್ಯ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಸಂಭಾಲ್ ಭೇಟಿಗೆ ಮುಂದಾಗಿದ್ದ ಸಮಾಜವಾದಿ ಪಕ್ಷದ ನಿಯೋಗ ತಡೆದ ಉತ್ತರ ಪ್ರದೇಶ ಪೊಲೀಸರು