ಬೆಂಗಳೂರು: ನಾಡಿನ ನವರಾತ್ರಿ ಆಚರಣೆ ಸಂಭ್ರಮ ಸಿಲಿಕಾನ್ ಸಿಟಿಯಲ್ಲೂ ಆರಂಭವಾಗಿದೆ. ಬನಶಂಕರಿ ದೇವಿ ಸೇರಿದಂತೆ ನಗರದ ಹಲವು ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ-ಪುನಸ್ಕಾರ ಆರಂಭವಾಗಿದೆ.
ಇಂದಿನಿಂದ ನವರಾತ್ರಿ ಪೂಜೆ ಆರಂಭವಾಗಿದ್ದು, ಕೋವಿಡ್ ಹಿನ್ನೆಲೆ ಅನೇಕ ದೇವಾಲಯಗಳಲ್ಲಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ನಗರದ ಅಣ್ಣಮ್ಮ ದೇವಾಲಯ, ಬನಶಂಕರಿ ದೇವಾಲಯ, ಸರ್ಕಲ್ ಮಾರಮ್ಮ, ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಇಂದು ನವರಾತ್ರಿಯ ಮೊದಲ ದಿನದ ವಿಶೇಷವಾಗಿ ಬನಶಂಕರಿ ದೇವಿಗೆ ಅರಶಿಣದ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರು ಮಾಸ್ಕ್ ಧರಿಸಿಕೊಂಡು ದೇವಿಗೆ ದೀಪಾರತಿ ಬೆಳಗುತ್ತಿದ್ದಾರೆ. ಮುಂದಿನ 9 ದಿನಗಳು ಉತ್ಸವ ದೇವಿಗೆ ಪೂಜೆ ನಡೆಯಲಿದೆ. ಕೋವಿಡ್ ಹಿನ್ನೆಲೆ ಭಕ್ತರು ಈ ಬಾರಿ ಜಾಗೃತಿ ವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
ಇದಲ್ಲದೆ ನಗರದ ಅಣ್ಣಮ್ಮ ದೇವಸ್ಥಾನದಲ್ಲಿ ಇಂದಿನಿಂದ ವಿಶೇಷ ಪೂಜೆ ನಡೆಯಲಿದ್ದು, ನವರಾತ್ರಿ ಹಿನ್ನೆಲೆ ಶಕ್ತಿ ದೇವತೆಯ ಅಲಂಕಾರ ಆರಂಭವಾಗಿದೆ. ಮಧ್ಯಾಹ್ನ ದೊಡ್ಡಮ್ಮ ದೇವಿಯನ್ನು ಪಟ್ಟಕ್ಕೆ ಕೂರಿಸಲಾಗುತ್ತದೆ. ಈಗಾಗಲೇ ಮಂಟಪವನ್ನು ಸಿದ್ಧ ಮಾಡಲಾಗಿದೆ. ಗರ್ಭ ಗುಡಿಯಲ್ಲಿ ದೇವರಿಗೆ ಪ್ರತಿ ದಿನ ವಿಶೇಷ ಅಭಿಷೇಕ ನಡೆಯಲಿದೆ.