ಬೆಂಗಳೂರು: ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆ ಬಗ್ಗೆ ಆತ್ಮಾವಲೋಕನ ಮಾಡುವ ನಿಟ್ಟಿನಲ್ಲಿ ಸಮಾಲೋಚನೆ ಸಭೆ ನಡೆಸಲು ನಿರ್ಧರಿಸಿದ್ದೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಪಸಭಾಪತಿ ಅವರ ಸಾವು ಎಲ್ಲರಿಗೂ ನೋವು ತಂದಿದ್ದು, ಆಘಾತವಾಗಿದೆ. ಅವರು ಪರಿಷತ್ನ ಉಪಸಭಾಪತಿಯಾಗಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದರು. ವಿಧಾನಮಂಡಲಕ್ಕೆ ದೊಡ್ಡ ಪರಂಪರೆ ಇದೆ, ಇತಿಹಾಸ ಇದೆ. ಪರಿಷತ್ನಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಲ್ಲಣಗೊಳಿಸಿದೆ. ಇದು ಅನಿರೀಕ್ಷಿತ ಘಟನೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಭಾಪತಿ ಬರದಂತೆ ತಡೆದಿದ್ದು, ಉಪಸಭಾಪತಿಗಳನ್ನು ಕೂರಿಸಿದ್ದು, ಬಳಿಕ ಅವರನ್ನು ಎಳೆದು ಕೆಳಗೆ ಇಳಿಸಿದ್ದು, ಅವತ್ತಿನ ನೂಕಾಟ, ತಲ್ಲಾಟವನ್ನು ನಾಡಿನ ಜನ ನೋಡಿದ್ದಾರೆ. ಇದು ರಾಜ್ಯದ ಜನರನ್ನು ರಾಷ್ಟ್ರ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಘಟನೆಯ ಬಗ್ಗೆ ಲೋಕಸಭೆ ಸ್ಪೀಕರ್ ಸೇರಿದಂತೆ ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲದ ಜವಾಬ್ದಾರಿಯುತ ವ್ಯಕ್ತಿಯಾಗಿ, ಈ ಸಂಸದೀಯ ವ್ಯವಸ್ಥೆಯನ್ನು ವಿಶ್ವಾಸಪೂರ್ಣವಾಗಿ ನಡೆಸುವ ಅಗತ್ಯವಿದೆ. ಹೀಗಾಗಿ ಆತ್ಮಾವಲೋಕನದ ಮಾಡಬೇಕಾಗಿದೆ. ಈ ಬಗ್ಗೆ ಹಿರಿಯರ ಜೊತೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದೇನೆ ಎಂದರು.
ಓದಿ : ಪರಿಷತ್ ಗಲಾಟೆ.. ತನಿಖೆಗಾಗಿ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ರಚನೆ
ಮೇಲ್ಮನೆಯ ಅಗತ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾಗಿ ಜನರ ವಿಶ್ವಾಸಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸುವ ಅಗತ್ಯ ಇದೆ. ಈ ಹಿನ್ನೆಲೆ ಆತ್ಮವಲೋಕನ ಸಭೆ ನಡೆಸುವುದು ನನ್ನ ಇಚ್ಛೆಯಾಗಿದೆ. ಮುಂದಿನ ದಿನಗಳಲ್ಲಿ ತಜ್ಞರು, ಹಿರಿಯರ ಜೊತೆ ಆತ್ಮಾವಲೋಕನ ಸಭೆ ನಡೆಸುತ್ತೇನೆ. ಕಾರ್ಯಾಂಗದಲ್ಲಿ, ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ ಅನೇಕ ಹಿರಿಯರ ಜೊತೆ ಸಮಾಲೋಚನಾ ಸಭೆ ನಡೆಸಲಿದ್ದೇನೆ. ಈ ಬಗ್ಗೆ ಶೀಘ್ರದಲ್ಲಿ ದಿನಾಂಕ ನಿಗದಿಪಡಿಸುತ್ತೇನೆ ಎಂದು ತಿಳಿಸಿದರು.