ಬೆಂಗಳೂರು: ಸಂಗೀತ ಮಾಂತ್ರಿಕ, ಸ್ವರಸ್ವತಿ ಪುತ್ರ, ಗಾಯನ ಲೋಕದ ಭೀಷ್ಮ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯಜಿಸಿದ್ದು ಅತ್ಯಂತ ದುಃಖದ ವಿಷಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಸುಮಾರು 16 ಭಾಷೆಗಳ ಗಾಯನ ಕ್ಷೇತ್ರದಲ್ಲಿ ತಮ್ಮ ಕಂಚಿನ ಕಂಠದ ಮೂಲಕ ಛಾಪು ಮೂಡಿಸಿದ್ದ ಎಸ್.ಪಿ.ಬಿ. 50 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿ ಚಿತ್ರರಸಿಕರ ಮನಸೂರೆಗೊಂಡವರು. ಕನ್ನಡ ಚಲನಚಿತ್ರ ಕ್ಷೇತ್ರದಲ್ಲೂ ತಮ್ಮ ಧ್ವನಿ ಮಾಧುರ್ಯ ಹಂಚುವ ಮೂಲಕ ಕನ್ನಡದ ಹೆಮ್ಮೆಯಾಗಿದ್ದವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ತಮ್ಮ ನಿರ್ದೇಶನದ ಮೈಸೂರು ಮಲ್ಲಿಗೆ, ನೆನಪಿನ ದೋಣಿ, ನೀಲಾ, ನಮ್ಮೆಜಮಾನ್ರು ಸಿನಿಮಾ ಸೇರಿದಂತೆ ಸುಮಾರು 15 ಸಿನಿಮಾಗಳಲ್ಲಿ ಒಟ್ಟು 60 ಗೀತೆಗಳನ್ನು ಹಾಡುವ ಮೂಲಕ ಸಿನಿಮಾದ ಗೆಲುವಿಗೆ ಹೆಗಲಾದವರು ಎಂದು ನಾಗಾಭರಣ ಸ್ಮರಿಸಿದ್ದಾರೆ.
ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಎಸ್.ಪಿ.ಬಿ. ಅವರು ನಟನೆ, ಸಂಗೀತ ಸಂಯೋಜನೆ, ರಸಸಂಜೆ ಕಾರ್ಯಕ್ರಮ ಸೇರಿದಂತೆ ಬಹುಮುಖ ಪ್ರತಿಭೆಯಾಗಿ ಅಭಿಮಾನಿಗಳ ಮನಗೆದ್ದಿದ್ದ ಅದ್ವಿತೀಯ ಸಾಧಕ. ಕಳೆದ ಒಂದೂವರೆ ತಿಂಗಳಿಂದ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮರಳಿ ಬರುತ್ತಾರೆ ಎಂಬ ಆಶಯವಿತ್ತು. ಆದರೆ, ವಿಧಿ ಲಿಖಿತ ಬೇರೆಯದೇ ಆಗಿ, ಬಾರದ ಲೋಕಕ್ಕೆ ಹೋಗಿರುವುದು ದುರ್ದೈವ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬ ವರ್ಗಕ್ಕೆ, ಆಪ್ತರು ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.