ಬೆಂಗಳೂರು: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಈಟಿವಿ ಭಾರತಕ್ಕೆ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ತಿಳಿಸಿದ್ದಾರೆ.
ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಎಸ್ಪಿಬಿ ಅವರಿಗೆ ಕಳೆದ 19 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಅವರ ಶ್ವಾಸಕೋಶ ತೀವ್ರ ಹಾನಿಗೊಳಗಾಗಿದೆ.ಆದ್ದರಿಂದ ಎಕ್ಮೋ ಮಷಿನ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು.
ಸದ್ಯ, ಎಸ್ಪಿಬಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆದು ಸ್ವತಃ ಉಸಿರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಎಸ್ಪಿಬಿ ಸ್ಪಂದಿಸುತ್ತಿದ್ದಾರೆ. ನಿನ್ನೆಗಿಂತ ಇವತ್ತು ಅವರ ಆಗೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದರು.
ಇನ್ನು, ಎಸ್‍ಪಿಬಿ ಜೊತೆಗೆ ಅವರ ಪತ್ನಿ ಸಾವಿತ್ರಿಯವರಿಗೂ ಕೂಡ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಅವರನ್ನು ಕೂಡ ಎಸ್‍ಪಿಬಿಯವರು ದಾಖಲಾಗಿರುವ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ, ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.