ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆಯ ಮೊದಲನೇ ಪ್ರಾಶಸ್ತ್ಯ ಎಣಿಕೆ ಸುತ್ತು ಮುಗಿದಿದ್ದು, ಇಂದು ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಪ್ರಾರಂಭವಾಗಿದೆ.
ನಿನ್ನೆ ರಾತ್ರಿಯಿಡೀ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ನಡೆದಿದ್ದು, ಆರು ಸುತ್ತುಗಳು ಮುಕ್ತಾಯವಾಗಿದೆ. ತೀವ್ರ ಸ್ಪರ್ಧೆ ಇರುವ ಹಿನ್ನೆಲೆ ಇದೀಗ ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯದಲ್ಲಿ ಮೂರನೇ ಸುತ್ತಿನಿಂದ ಮುನ್ನಡೆ ಪಡೆದಿರುವ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಮುನ್ನಡೆ ಸಾಧಿಸಿದ್ದಾರೆ.
ತುರುಸಿನ ಸ್ಪರ್ಧೆ ಏರ್ಪಟ್ಟಿರುವ ಕ್ಷೇತ್ರದಲ್ಲಿ ಇಂದು ಬೆಳಗಿನ ಜಾವದವರೆಗೂ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಡೆದಿದೆ. ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಒಟ್ಟು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಒಟ್ಟು 24,217 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ತೀವ್ರ ಸ್ಪರ್ಧೆಯೊಡ್ಡಿದ್ದು, 19,146 ಮತ ಗಳಿಸಿದ್ದಾರೆ. ಉಳಿದಂತೆ ಜೆಡಿಎಸ್ನ ಚೌಡರೆಡ್ಡಿ ತೂಪಲ್ಲಿ 16,321 ಮತ ಗಳಿಸಿದ್ದರೆ, ಕಾಂಗ್ರೆಸ್ನ ರಮೇಶ್ ಬಾಬು 8,607 ಮತಗಳಿಸಿದ್ದಾರೆ.
ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿರುವ ಆಗ್ನೇಯ ಪದವೀಧರರ ಕ್ಷೇತ್ರದ ಫಲಿತಾಂಶ ಮೊದಲ ಪ್ರಾಶಸ್ತ್ಯದ ಎಣಿಕೆಯಲ್ಲಿ ಲಭಿಸಿಲ್ಲ. ಇದರಿಂದ ಇದೀಗ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.