ಬೆಂಗಳೂರು: ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಎರಡು ದಿನಗಳ 'ನವ ಸಂಕಲ್ಪ ಶಿಬಿರ' ಆಯೋಜಿಸಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ಎಐಸಿಸಿ ಆಯೋಜಿಸಿದ್ದ ಚಿಂತನ್ ಶಿಬಿರ ಮಾದರಿಯಲ್ಲೇ ರಾಜ್ಯ ಕಾಂಗ್ರೆಸ್ನಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಶಿಬಿರದಲ್ಲಿ ಪ್ರಮುಖರಾದ ಎಸ್.ಆರ್. ಪಾಟೀಲ್, ಜಮೀರ್ ಅಹಮದ್, ಮುದ್ದಹನುಮೇಗೌಡ, ಬಿ.ಎಲ್ ಶಂಕರ್, ಎಂ.ಆರ್ ಸೀತಾರಾಂ ಗೈರು ಹಾಜರಾಗಿರುವುದು ಕಂಡು ಬಂತು.
ರಾಜ್ಯಸಭೆ ಇಲ್ಲವೇ ಪರಿಷತ್ ಟಿಕೆಟ್ ಕೂಡ ಎರಡನೇ ಬಾರಿ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಎಸ್.ಆರ್ ಪಾಟೀಲ್ ಇಂದಿನ ಸಭೆಗೆ ಆಗಮಿಸಲಿಲ್ಲ. ಪಕ್ಷದ ಬೆಳವಣಿಗೆಗಳ ಬಗ್ಗೆ ಕೊಂಚ ಅಸಮಾಧಾನ ಹೊಂದಿರುವ ಜಮೀರ್ ಅಹಮದ್, ಪರಿಷತ್ ಟಿಕೆಟ್ ಸಿಗದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಎಂ.ಆರ್ ಸೀತಾರಾಂ ಕೂಡ ಗೈರಾಗಿದ್ದರು.
ಲೋಕಸಭೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಹೆಚ್.ಡಿ ದೇವೇಗೌಡರಿಗೆ ಟಿಕೆಟ್ ತ್ಯಾಗ ಮಾಡಿದ್ದ ಮುದ್ದಹನುಮೇಗೌಡ ರಾಜ್ಯಸಭೆ ಇಲ್ಲವೇ ಪರಿಷತ್ಗೆ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದರು. ಆದರೆ, ಅವಕಾಶ ಸಿಗದ ಮೇಲೆ ಬೇಸರಗೊಂಡಿದ್ದರು. ಈ ಕಾರಣಗಳಿಂದಲೇ ಇವರೆಲ್ಲ ಸಭೆಗೆ ಗೈರಾಗಿದ್ದರು ಎನ್ನಲಾಗಿದೆ.
ಇತ್ತ ಕಾಂಗ್ರೆಸ್ನಲ್ಲಿ ನವ ಸಂಕಲ್ಪ, ಅತ್ತ ವಿಧಾನಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಆರ್ ಪಾಟೀಲ್ ಪಕ್ಷ ತೊರೆಯುವ ಚಿಂತನೆ ನಡೆಸಿರುವ ಮಾಹಿತಿ ಇದೆ. ಇನ್ನೊಂದೆಡೆ ಮಾಜಿ ಸಚಿವ ಸೀತಾರಾಂ ಕೂಡ ಕಾಂಗ್ರೆಸ್ಗೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಪುತ್ರ ರಕ್ಷಾ ರಾಮಯ್ಯಗೆ ನೀಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಹ ಒಂದೇ ವರ್ಷಕ್ಕೆ ಸೀಮಿತಗೊಳಿಸಿ ಅವಮಾನಿಸಿರುವುದು ಕೂಡ ಸೀತಾರಾಂಗೆ ಬೇಸರ ತರಿಸಿದೆ ಎನ್ನಲಾಗುತ್ತಿದೆ.
ಒಟ್ಟಾರೆ ಪಕ್ಷ ಸಂಘಟನೆ ಉದ್ದೇಶದಿಂದ ಆಯೋಜನೆಗೊಂಡಿರುವ 'ನವ ಸಂಕಲ್ಪ ಶಿಬಿರ'ಕ್ಕೆ ಪ್ರಮುಖರು ಗೈರಾಗಿರುವುದು ಕಾಂಗ್ರೆಸ್ಗೆ ಪ್ರಮುಖ ಹಿನ್ನಡೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.
ಇದನ್ನೂ ಓದಿ: ಟಿಕೆಟ್ ಬಗ್ಗೆ ಸಿದ್ದು- ಡಿಕೆಶಿ ದೂಷಿಸಬೇಡಿ, ಆಂತರಿಕ ಅಸಮಾಧಾನದಿಂದ ಪಕ್ಷಕ್ಕೆ ಹಾನಿ: ಸುರ್ಜೇವಾಲಾ ಪಾಠ