ಬೆಂಗಳೂರು: ರೌಡಿಶೀಟರ್ಗಳ ಸಂಪರ್ಕದ ವಿವಾದ ಬಿಜೆಪಿಯನ್ನು ಸುತ್ತಿಕೊಳ್ಳುತ್ತಿದೆ. ರೌಡಿ ಶೀಟರ್ ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿ ವಿವಾದದಲ್ಲಿ ಸಿಲುಕಿಕೊಂಡ ಬೆನ್ನಲ್ಲೇ ವಿಲ್ಸನ್ ಗಾರ್ಡನ್ ನಾಗ, ವಸತಿ ಸಚಿವ ವಿ ಸೋಮಣ್ಣ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆದರೆ ಇದನ್ನು ಸೋಮಣ್ಣ ತಳ್ಳಿಹಾಕಿದ್ದಾರೆ.
ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಅನ್ನೋದು ನನಗೆ ಗೊತ್ತಿಲ್ಲ. ನಾಗ ಎಂಬುವವರನ್ನು ನಾನೂ ನೋಡಿಯೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ: ಒಂದು ಗಂಟೆಯಲ್ಲ, ಒಂದು ನಿಮಿಷವೂ ನಾನು ಮಾತನಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಆ ತರಹದ ಜೀವನ ಮಾಡಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ಓಡಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ. ಒಳ್ಳೆಯವರನ್ನೂ ರಸ್ತೆಗೆ ಕರೆ ತಂದು ನಿಲ್ಲಿಸುವ ಕೆಲಸ ಮಾಡಬೇಡಿ ಎಂದರು.
ನನಗೆ ರೌಡಿಗಳ ಪರಿಚಯವೇ ಇಲ್ಲ: ರಾಜಕಾರಣದಲ್ಲಿ 11 ಚುನಾವಣೆ ಎದುರಿಸಿದ್ದೇನೆ. ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಮ್ಮ ವಯಸ್ಸು, ನಮ್ಮ ಸೇವೆಯನ್ನು ಮಾಧ್ಯಮ ಸ್ನೇಹಿತರೂ ಒಮ್ಮೆ ಅವಲೋಕಿಸಿಕೊಳ್ಳಬೇಕು. ಆರೋಪ ಮಾಡುವ ಮೊದಲು ನಮ್ಮ ರಾಜಕೀಯ ಇತಿಹಾಸವನ್ನು ನೋಡಬೇಕು. ಸುಮ್ಮನೆ ಸುಳ್ಳು ಆರೋಪ ಮಾಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಬೇಡಿ. ದಯಮಾಡಿ ಇಂತಹ ಸುದ್ದಿಯನ್ನು ಬಿತ್ತರಿಸುವಾಗ ನಮ್ಮ ಪೂರ್ವಾಪರ ತಿಳಿದುಕೊಳ್ಳಿ ಎಂದು ಸಚಿವರು ಮನವಿ ಮಾಡಿದರು.
ಒಂದೂವರೆ ಗಂಟೆ ಮಾತುಕತೆ ವದಂತಿ: ಇನ್ನು ಕಳೆದ ರಾತ್ರಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ, ಸೋಮಣ್ಣ ಅವರನ್ನು ಭೇಟಿ ಮಾಡಿ ಒಂದೂವರೆ ಗಂಟೆ ಸೋಮಣ್ಣ ಜೊತೆ ಮಾತುಕತೆ ನಡೆಸಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸೈಲೆಂಟ್ ಸುನೀಲ್ ವಿವಾದ ತಣ್ಣಗಾಗುವ ಮೊದಲೇ ನಾಗನ ಎಂಟ್ರಿಯಿಂದ ಬಿಜೆಪಿ ಮತ್ತೊಮ್ಮೆ ರೌಡಿ ಶೀಟರ್ ಸಂಪರ್ಕದ ವಿವಾದಕ್ಕೆ ಸಿಲುಕುವಂತಾಗಿದೆ.
ಇತ್ತೀಚೆಗೆ ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ಸೈಲೆಂಟ್ ಸುನೀಲ್ ಆಯೋಜನೆ ಮಾಡಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ವಿವಾದಕ್ಕೆ ಸಿಲುಕಿದ್ದರು. ಅದರ ಬೆನ್ನಲ್ಲೇ ರೌಡಿ ಹಿನ್ನೆಲೆಯ ಫೈಟರ್ ರವಿಯನ್ನು ಬಿಜೆಪಿಗೆ ಸೇರಿಸಿಕೊಂಡು ರಾಜ್ಯ ನಾಯಕರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಅಪವಾದದಿಂದ ಹೊರಬರುವ ಮುನ್ನವೇ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಬಿಜೆಪಿ ಸಂಪರ್ಕ ಮಾಡಿದ್ದಾನೆ ಎನ್ನುವುದು ಇದೀಗ ಬಿಜೆಪಿಗೆ ಮತ್ತಷ್ಟು ಇರುಸು ಮುರುಸಾಗುವಂತೆ ಮಾಡಿದೆ.
ಇದನ್ನೂ ಓದಿ: ರೌಡಿ ಶೀಟರ್ಗಳಿಗೆ ಬಿಜೆಪಿ ಮನ್ನಣೆ ನೀಡಲ್ಲ: ಸಿಎಂ ಬೊಮ್ಮಾಯಿ