ಬೆಂಗಳೂರು: ಒಂದೇ ತಿಂಗಳಲ್ಲಿ ಚಂದ್ರ ಗ್ರಹಣ ಆದ ಬೆನ್ನಲ್ಲೇ ಸೂರ್ಯಗ್ರಹಣ ಗೋಚರಿಸಲಿದೆ. ಜೂನ್ ಆರನೇ ತಾರೀಕಿಗೆ ಚಂದ್ರ ಗ್ರಹಣ ಆಗಿತ್ತು. ಇದೀಗ ಜೂನ್ 21 ನೇ ತಾರೀಕು ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ.
ಇದು ಉತ್ತರ ಭಾರತದಲ್ಲಿ ಕಂಕಣ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಆದರೆ, ದಕ್ಷಿಣ ಭಾರತಕ್ಕೆ ಇದು ಪಾರ್ಶ್ವ ಸೂರ್ಯಗ್ರಹಣವಾಗಿ ಕಾಣಲಿದೆ. ಬೆಂಗಳೂರಲ್ಲಿ ಸುಮಾರು ಬೆಳಗ್ಗೆ 10:12 ಕ್ಕೆ ಆರಂಭವಾಗಿ 11:45ರ ಸುಮಾರಿಗೆ ಪರಿಪೂರ್ಣ ಹಂತ ತಲುಪಿ ಮಧ್ಯಾಹ್ಮ 1:30 ಗಂಟೆಗೆ ಗ್ರಹಣ ಅಂತ್ಯಗೊಳ್ಳಲಿದೆ ಎಂದು ಬೆಂಗಳೂರು ನೆಹರೂ ತಾರಾಲಯದ ವಿಜ್ಞಾನಿ ಆನಂದ್ ಎಂ.ವೈ ತಿಳಿಸಿದರು.
ಕಳೆದ ಡಿಸೆಂಬರ್ನಲ್ಲಿ ದಕ್ಷಿಣ ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿತ್ತು. ಇದೀಗ ಜೂನ್ 21 ರಂದು ಪಂಜಾಬ್ ಹರಿಯಾಣ, ಉತ್ತರಾಖಂಡ್ ಮೂಲಕ ಹಾದುಹೋಗಲಿದೆ. ಹೀಗಾಗಿ ದೇಶದ ಬೇರೆ ಭಾಗಗಳಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.