ಬೆಂಗಳೂರು : ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಿದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಅಮಾನತುಪಡಿಸಿದ ವಿಧಾನಸಭೆ ವಿಶೇಷ ಮಂಡಳಿಯ ಆದೇಶ ರದ್ದುಪಡಿಸುವಂತೆ ಕೋರಿ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿ ಮೇಲಿನ ತೀರ್ಪನ್ನು ನ್ಯಾ. ಪಿ. ಬಿ. ಭಜಂತ್ರಿ ಅವರಿದ್ದ ಪೀಠ ಗುರುವಾರ ಪ್ರಕಟಿಸಿದೆ. ಹೈಕೋರ್ಟ್ ತನ್ನ ಆದೇಶದಲ್ಲಿ, ಸರ್ಕಾರ ತನ್ನ ನೌಕರರನ್ನು ಅಮಾನತುಪಡಿಸಿದ ಬಳಿಕ ಆರು ತಿಂಗಳ ಒಳಗೆ ಆರೋಪಗಳನ್ನು ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದಿದೆ.
ನಿಗದಿತ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಸೇವೆಗೆ ಮರು ನೇಮಕಗೊಳಿಸಬೇಕು. ಈ ಪ್ರಕರಣದಲ್ಲಿ ಒಂದೂವರೆ ವರ್ಷ ಕಳೆದರೂ ತನಿಖೆ ಪೂರ್ಣಗೊಳಿಸಿಲ್ಲ. ಆದ್ದರಿಂದ, ಅರ್ಜಿದಾರರ ಅಮಾನತು ಆದೇಶವು ನಿಯಮಾನುಸಾರ ನಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ :
ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್. ಮೂರ್ತಿ ಅವರನ್ನು ಅವ್ಯವಹಾರ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ ವಿಧಾನಸಭೆ ಅಧೀನ ಕಾರ್ಯದರ್ಶಿ 2018ರ ಡಿಸೆಂಬರ್ 27ರಂದು ಆದೇಶ ಹೊರಡಿಸಿದ್ದರು. 2016 ಹಾಗೂ 2017ನೇ ಸಾಲಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ವ್ಯಯಿಸಿದ್ದ ಖರ್ಚು ವೆಚ್ಚಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿರುವ ಶಾಸಕಾಂಗದ ವಿಶೇಷ ಮಂಡಳಿಯ ಆದೇಶದ ಅನುಸಾರ ಸೇವೆಯಿಂದ ಅಮಾನತು ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಸ್. ಮೂರ್ತಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.