ಬೆಂಗಳೂರು: ಟೆಂಪೋ ಅಡ್ಡಗಟ್ಟಿ ಬರೋಬ್ಬರಿ 57 ಲಕ್ಷ ಮೌಲ್ಯದ ಸ್ಮಾರ್ಟ್ ವಾಚ್ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಆರ್.ಆರ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀರ್ ಅಹಮದ್ (28) ಹಾಗೂ ಸೈಯದ್ ಶಾಹೀದ್ (26) ಬಂಧಿತ ಆರೋಪಿಗಳು. ಜ.15ರ ರಾತ್ರಿ 10:45ರ ಸುಮಾರಿಗೆ ಆರ್.ಆರ್ ನಗರದ ಜವರೇಗೌಡನ ದೊಡ್ಡಿ ಬಳಿ ಜೈದೀಪ್ ಎಂಟರ್ಪ್ರೈಸಸ್ ಹೆಸರಿನ ವೇರ್ ಹೌಸ್‌ಗೆ ಸೇರಿದ ಟೆಂಪೋವನ್ನ ಅಡ್ಡಗಟ್ಟಿದ್ದ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ಮಾಡಿ ಟೆಂಪೋ ಸಮೇತ ಪರಾರಿಯಾಗಿದ್ದರು.
57 ಲಕ್ಷ ಮೌಲ್ಯದ ಟೈಟಾನ್ ಕಂಪನಿಯ 23 ಬಾಕ್ಸ್ಗಳಿರುವ 1,282 ವಾಚ್ಗಳಿದ್ದ ಟೆಂಪೋದಲ್ಲಿ ವೇರ್ ಹೌಸ್ ಕೆಲಸಗಾರರಾದ ಜಾನ್ ಮತ್ತು ಬಿಸಾಲ್ ಕಿಸಾನ್ ಮಾಲೂರಿನ ಪ್ಲಿಪ್ ಕಾರ್ಟ್ ಮೂಲಕ ಆರ್.ಆರ್.ನಗರದ ಜವರೇಗೌಡ ನಗರದ ಬಳಿ ಬರುತ್ತಿದ್ದರು. ಆಗ ಒಂದು ಕಾರು ಹಾಗೂ 3 ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಟೆಂಪೋ ಅಡ್ಡಗಟ್ಟಿ ಕೈಗಳಿಂದ ಹಲ್ಲೆ ಮಾಡಿ ವಾಹನ ಸಮೇತ ವಾಚ್ಗಳನ್ನು ಕೊಂಡೊಯ್ದಿದ್ದರು. ಈ ಸಂಬಂಧ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಿಷ್ಟು: ದೂರುದಾರ ಹನುಮೇಗೌಡನ ಟೆಂಪೋ ಆರೋಪಿಗಳ ಬೈಕ್ಗೆ ಟಚ್ ಮಾಡಿದ್ದ. ಇದರಿಂದ ಅಸಮಾನಧಾನಗೊಂಡ ಆರೋಪಿಗಳು ಟೆಂಪೋ ಹಿಂಬಾಲಿಸಿ ಹಲ್ಲೆ ಮಾಡಿ ವಾಹನ ಸಮೇತ ವಾಚ್ಗಳನ್ನು ಹೊತ್ತೊಯ್ದಿದ್ದರು. ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್ಗಳನ್ನು ತೆಗೆದುಕೊಂಡು ಬೇರೆಡೆ ಸಾಗಾಟ ಮಾಡಿದ್ದರು. ಬಳಿಕ ಟೆಂಪೋವನ್ನು ಅದೇ ಜಾಗದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸ್ಗಳು ದಾಖಲಾಗಿಲ್ಲ. ಸದ್ಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪಟಾಕಿ ವ್ಯಾಪಾರಿ ಅಡ್ಡಗಟ್ಟಿ ದರೋಡೆ: ಇತ್ತೀಚೆಗೆ ಹೆಬ್ಬಗೋಡಿ ಪಟಾಕಿ ಅಂಗಡಿಯಲ್ಲಿ ವ್ಯಾಪಾರ ಮಾಡಿ ಚಂದ್ರಶೇಖರ್ ಎಂಬುವವರು ಹಣ ತೆಗೆದುಕೊಂಡು ಅತ್ತಿಬೆಲೆ ಹೆದ್ದಾರಿ ಗಡಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರನ್ನು ಅಡ್ಡಗಟ್ಟಿ, ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಆರೋಪಿಗಳು 20 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಎನ್‌ಜಿಎಐ ಬಡಾವಣೆ ಅಗ್ರಹಾರದ ಅಜಯ್(27), ಲಕ್ಷ್ಮಿ ಲೇಔಟ್ ಗಾರ್ವೇಬಾವಿ ಪಾಳ್ಯದ ನವೀನ್ (23), ಸಂಪಿಗೆ ನಗರ ಕಮ್ಮಸಂದ್ರದ ಯಮನೂರು ನಾಯ್ಕ(35), ಹೆಬ್ಬಗೋಡಿ ಗೌತಮ್(26) ಹಾಗೂ ಸಿಂಗಸಂದ್ರದ ಜೆಬಿನ್(23) ಬಂಧಿತ ಆರೋಪಿಗಳು.
ಇದನ್ನೂ ಓದಿ: ಪಟಾಕಿ ವ್ಯಾಪಾರಿ ಅಡ್ಡಗಟ್ಟಿ ₹20 ಲಕ್ಷ ದರೋಡೆ: ಐವರ ಬಂಧನ
ಬೈಕ್ ಅಡ್ಡಗಟ್ಟಿ ಹಣ ಸುಲಿಗೆ: ಬೈಕ್ ಸವಾರನನ್ನು ಅಡ್ಡಗಟ್ಟಿದ ದುಷ್ಕರ್ಮಿಯೊಬ್ಬ ಹಣ ಸುಲಿಗೆ ಮಾಡಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮಹೇಂದ್ರ ಕುಮಾರ್ ಮೇಸ್ತಾ ಎಂಬುವರು ಇಟಿಎಂ ಮಾಲ್ ಬಳಿಯಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಚಾಕು ತೋರಿಸಿ ತಿವಿಯುವುದಾಗಿ ಹೆದರಿಸಿದ್ದಾನೆ. ಬಳಿಕ ಭೀತಿಗೊಳಗಾದ ಮಹೇಂದ್ರ ಅವರಿಂದ 13 ಸಾವಿರ ರೂ ಹಾಗೂ ಆಧಾರ್ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದ. ಪೊಲೀಸರು ಆರೋಪಿಗೆ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬೈಕ್ ಅಡ್ಡಗಟ್ಟಿ ಹಣ ಸುಲಿಗೆ, ದುಷ್ಕರ್ಮಿ ಪರಾರಿ