ಬೆಂಗಳೂರು: ಈ ಮಗುವಿಗೆ ಈಗ ಕೇವಲ 4 ವರ್ಷ. ಈ ವಯಸ್ಸಿಗೆ ಅದೆಷ್ಟೋ ಮಕ್ಕಳಿಗೆ ಇನ್ನು ಸರಿಯಾಗಿ ಮಾತು ಬರುವುದಿಲ್ಲ. ಆದರೆ, ಈ ಪುಟಾಣಿ ಓದುತ್ತಾಳೆ, ಬರೆಯುತ್ತಾಳೆ, ಸಾಮಾನ್ಯ ಜ್ಞಾನ ಅಗಾಧ. ಈ ಪುಟ್ಟ ಪತಿಭೆ ತನ್ನ ಜ್ಞಾನದಿಂದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ಈ ಮಗುವಿನ ಹೆಸರು ಮೇಧಾ ಗಂಗಾಧರ್. ಇವರ ಮನೆಯಲ್ಲಿ ಉನ್ನತ ಶಿಕ್ಷಣ ಪಡೆದವರು ಯಾರು ಇಲ್ಲ. ಆದರೂ ಈ ಪುಟ್ಟ ಮಗು ತನ್ನ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾಳೆ ಎಂದರೆ ಸಾಹಸವೇ ಸರಿ. ಮೇಧಾ ಜನಿಸಿದ್ದು, 2018ರ ಮಾರ್ಚ್ 1ರಂದು. ಅಪ್ಪ ಅಮ್ಮ ಮೂಲತಃ ಹಾಸನದವರಾದರೂ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
![Medha Gangadhar](https://etvbharatimages.akamaized.net/etvbharat/prod-images/kn-bng-04-story-about-small-kid-who-have-registered-name-in-international-indian-karantaka-book-of-records-7210969_25042022174457_2504f_1650888897_632.jpg)
ಸದಾ ಲವಲವಿಕೆಯಿಂದಿರುವ ಈ ಪುಟಾಣಿ ಕ್ಷಣಾರ್ಧದಲ್ಲಿ ಏನು ಹೇಳಿದರು ಕಲಿಯುತ್ತಾಳೆ. ಒಂದು ವಾರದ ಬಳಿಕ ಕಲಿಕೆಯನ್ನು ತಪ್ಪದೇ ಪುನರುಚ್ಚರಿಸುತ್ತಾಳೆ. ಯಾರಾದರೂ ತಪ್ಪು ಉತ್ತರ ಹೇಳಿದರೂ ವಿಚಲಿತಗೊಳ್ಳದೇ ಸರಿಯುತ್ತರ ಹೇಳುತ್ತಾಳೆ. ಆಟವಾಡುತ್ತಲೇ ಓದಿನತ್ತ ವಾಲಿದ ಪುಟಾಣಿಗೆ ಈಗ ಏನೆಲ್ಲ ಬರುತ್ತೆ ಎಂದು ಕೇಳಿದರೆ ಬೆರಗು ಉಂಟಾಗುತ್ತದೆ. ಅಕ್ಷರಗಳು, ಕನ್ನಡ ವರ್ಣಮಾಲೆ, ಅಂಕಿಗಳನ್ನು ಕನ್ನಡ, ಇಂಗ್ಲಿಷ್ ಸೇರಿದಂತೆ ಮೂರು ಭಾಷೆಯನ್ನು ಬರೆಯುತ್ತಾಳೆ. ದೇಶದ ಎಲ್ಲ ರಾಜ್ಯಗಳ ಹೆಸರು, ಸಂಸದರ ಕ್ಷೇತ್ರಗಳ ಹೆಸರು, ಜಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಯಾವ ಕೃತಿಗೆ ಎಂಬುದನ್ನೂ ಥಟ್ ಅಂತ ಹೇಳುತ್ತಾಳೆ.
![medha Gangadhar](https://etvbharatimages.akamaized.net/etvbharat/prod-images/kn-bng-04-story-about-small-kid-who-have-registered-name-in-international-indian-karantaka-book-of-records-7210969_25042022174457_2504f_1650888897_907.jpg)
ಉತ್ತರ ಕೊಟ್ಟು ಆಟದಲ್ಲಿ ಮಗ್ನಳಾಗುವ ಮೇಧಾ: 160ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ದೇಶಗಳು, ವ್ಯಕ್ತಿಗಳು, ಪ್ರಮುಖ ಸ್ಥಳಗಳ ಚಿತ್ರಗಳನ್ನು ಗುರುತಿಸುತ್ತಾಳೆ. ರಾಷ್ಟ್ರ ಲಾಂಛನ, ರಾಷ್ಟ್ರ ಪಕ್ಷಿ, ಪ್ರಾಣಿ, ದೇಹದಲ್ಲಿರುವ ಅಂಗಾಂಗಗಗಳು, ಕಂಪ್ಯೂಟರ್‌ನ ಭಾಗಗಳು, 21ಕ್ಕೂ ಹೆಚ್ಚು ಬಿತ್ತನೆ ಬೀಜಗಳ ಹೆಸರು, 30 ಹೂವುಗಳು, 20 ವಾಹನಗಳು, 70ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳು, ತಿಂಗಳುಗಳ ಹೆಸರು ಹೇಳುತ್ತಾಳೆ. ತಿರುಚಿ ಕೇಳಿದ ಎಲ್ಲದಕ್ಕೂ ಥಟ್ ಅಂತ ಸರಿ ಉತ್ತರ ಕೊಟ್ಟು ಆಟದಲ್ಲಿ ಮಗ್ನನಾಗುತ್ತಾಳೆ.
![Karnataka Book of Records](https://etvbharatimages.akamaized.net/etvbharat/prod-images/kn-bng-04-story-about-small-kid-who-have-registered-name-in-international-indian-karantaka-book-of-records-7210969_25042022174457_2504f_1650888897_198.jpg)
ಹೆಚ್ಚು ಓದು ಕಂಡಿಲ್ಲದ ತಂದೆ ತಾಯಿ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆ ಬಳಿಯ ಪುಟ್ಟ ಗ್ರಾಮದ ದಂಪತಿಗಳಾದ ಹೆಚ್. ಎಸ್. ಮಂಜುನಾಥ್ ಮತ್ತು ಟಿ.ಎಂ ಪವಿತ್ರರ ಪುತ್ರಿ ಮೇಧಾ ಪುಟ್ಟ ವಯಸ್ಸಿನಲ್ಲೇ ಹಲವು ದಾಖಲೆಗಳನ್ನು ಮಾಡಿದ್ದಾಳೆ. ತಂದೆ ತಾಯಿ ಹೆಚ್ಚೇನೂ ಓದಿಲ್ಲ. ತಂದೆ ಮಂಜುನಾಥ್ ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪವಿತ್ರಾ ಮನೆಯಲ್ಲಿ ಮಗಳಿಗೆ ಆಟವಾಡಿಸುತ್ತಲೇ ಓದಿನ ಹುಚ್ಚು ಹಿಡಿಸಿದ್ದಾರೆ. ತಾಯಿಯೇ ಮೊದಲ ಗುರು ಎಂಬ ಮಾತನ್ನು ಕೃತಿಯಲ್ಲಿ ತೋರಿಸಿದ್ದಾರೆ.
![International Book of Records](https://etvbharatimages.akamaized.net/etvbharat/prod-images/kn-bng-04-story-about-small-kid-who-have-registered-name-in-international-indian-karantaka-book-of-records-7210969_25042022174457_2504f_1650888897_563.jpg)
ಓದಿನಲ್ಲಿ ತಲ್ಲೀನ: 2 ವರ್ಷ 10 ತಿಂಗಳಿಗೆ ಮಾತನಾಡುತ್ತಿದ್ದ ಮಗಳು ಎಷ್ಟು ಕ್ಲಿಷ್ಟಕರ ಪದವಿದ್ದರೂ ಸರಾಗವಾಗಿ ಹೇಳುತ್ತಿದ್ದಳು. ಒಂದೇ ವಾರದಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿತಿದ್ದಾಳೆ. ಮಗಳ ಕೈಗೆ ಪೆನ್ಸಿಲ್ ಕೊಟ್ಟು ಬರಹ ಅಭ್ಯಾಸ ಮಾಡಿಸಲು ಆರಂಭಿಸಿದೆ. ಆರಂಭದಲ್ಲಿಯೇ ಪಕ್ವವಾಗಿ ಬರೆದ ಮಗಳು, ಕೆಲವೇ ದಿನಗಳಲ್ಲಿ ಇಂಗ್ಲಿಷ್ ಹಿಂದಿ ಸರಾಗವಾಗಿ ಬರೆದಳು. ಒಂದು ಬಾರಿ ಹೇಳಿದರೂ ಓದು ಬರಹದಲ್ಲಿ ತಲ್ಲೀನಳಾಗುತ್ತಾಳೆ ಎಂದು ತಾಯಿ ಪವಿತ್ರ ಈಟಿವಿ ಭಾರತಕ್ಕೆ ತಿಳಿಸುತ್ತಾರೆ.
ಅಣ್ಣನ ಸಲಹೆ: ನನ್ನ ಮಗಳ ಬಗ್ಗೆ ಎಂದು ನನ್ನ ಅಣ್ಣನಿಗೆ ಹಾಗೆ ಮಾತನಾಡುತ್ತಾ ಹೇಳಿದ್ದೆ. ಲಾರಿ ಚಾಲಕರಾಗಿರುವ ನನ್ನ ಅಣ್ಣ ನಿನ್ನ ಮಗಳ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸು ಎಂದಿದ್ದ. ಮಗಳ ಸಾಧನೆ ಬಗ್ಗೆ ವಿಡಿಯೋ ಮಾಡಿ ಕಳುಹಿಸಿದ್ದೆ. 2021 ರ ಮೇ 5 ರಂದು ಮಗಳ ಹೆಸರು ದಾಖಲಾಯಿತು ಎಂದು ತಂದೆ ಮಂಜುನಾಥ್ ಸಂತಸದಿಂದ ಹೇಳುತ್ತಾರೆ.
ಓದಿ: ಹಿಜಾಬ್ ತೆಗೆಯಲು ನಿರಾಕರಣೆ: ಪಿಯು ಪರೀಕ್ಷೆ ಬಹಿಷ್ಕರಿಸಿ ಹೊರನಡೆದ ವಿದ್ಯಾರ್ಥಿನಿಯರು