ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಿದ ಪ್ರಕರಣದ ವಿರುದ್ಧ ಎಸ್ಐಟಿ ಮೂಲಕ ಸಮಗ್ರ ತನಿಖೆ ನಡೆಸಿ, ಭೂ ಕಬಳಿಕೆದಾರರು ಹಾಗೂ ಅಧಿಕಾರಿಗಳ ನಡುವಿನ ಜಾಲವನ್ನು ಭೇದಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ನಿಯಮ 69ರಡಿ ಸರ್ಕಾರಿ ಜಮೀನು ಕಬಳಿಕೆ ಮೇಲಿನ ಅಲ್ಪ ಕಾಲಾವಧಿ ಚರ್ಚೆಗೆ ಉತ್ತರಿಸಿದ ಸಿಎಂ, ಎ.ಟಿ.ರಾಮಸ್ವಾಮಿ ಸಂಪೂರ್ಣ ಪ್ರಾಮಾಣಿಕತೆ, ನಿಷ್ಠೆಯಿಂದ ಭೂಗಳ್ಳರ ಮಟ್ಟಹಾಕಲು ಪಣ ತೊಟ್ಟಿದ್ದಾರೆ. ಅವರಿಗೆ ಈ ಸದನದಲ್ಲಿ ಅಭಿನಂದನೆ ಹೇಳುತ್ತೇನೆ. ಭೂಮಿ ಬೆಲೆ ಹೆಚ್ಚಾದಾಗಿಂದ ನಕಲಿ ದಾಖಲೆಗಳ ಸೃಷ್ಟಿ ಹೆಚ್ಚಳವಾಗಿದೆ. ಹಲವು ಪ್ರಕರಣಗಳು ದಾಖಲಾಗಿವೆ.
ಕೇಸ್ ದಾಖಲಾದರೂ ಕೋರ್ಟ್ನಿಂದ ಆದೇಶ ತರುತ್ತಾರೆ. ಅಧಿಕಾರಿಗಳ ಮೇಲೆ ನಾವು ನಂಬಿಕೆ ಇಟ್ಟಿರುತ್ತೇವೆ. ಆದರೆ ಭೂಗಳ್ಳರು ಕೋರ್ಟ್ ನಿಂದ ಆದೇಶ ತರುತ್ತಾರೆ. ಅಧಿಕಾರಿಗಳು ಕೋರ್ಟ್ ಆದೇಶದಂತೆ ನಡೆದುಕೊಂಡಿದ್ದೇವೆ ಎನ್ನುತ್ತಾರೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಕೆಲ ಅಧಿಕಾರಿಗಳೂ ಕೂಡ ಶಾಮೀಲಾಗಿದ್ದಾರೆ. ಅಧಿಕಾರಿಗಳು ಆಸೆ, ಆಮಿಷಗಳಿಗೆ ಬಲಿಯಾಗುತ್ತಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಈ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಒಪ್ಪಿಕೊಂಡರು.
ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಅಲ್ಲಿನ ಉಪವಿಭಾಗಾಧಿಕಾರಿ ಕೆ. ರಂಗನಾಥ್ ಅಕ್ರಮ ಜಮೀನು ಮಂಜೂರು ಮಾಡಿದ ಪ್ರಕರಣ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಕರಣವನ್ನು ನಾನು ಎಸಿಬಿ ತನಿಖೆಗೆ ವಹಿಸುತ್ತೇನೆ. ತಕ್ಷಣ ಕೆ.ರಂಗನಾಥ್ ಅವರನ್ನ ಅಮಾನತು ಮಾಡಲಾಗುವುದು. ನಕಲಿ ದಾಖಲೆ ಬಗ್ಗೆ ವಿಶೇಷ ತನಿಖಾ ತಂಡ ಮಾಡಿ, ವಿಶೇಷ ಡ್ರೈವ್ ಮಾಡುತ್ತೇವೆ. ಇತ್ತೀಚೆಗೆ ವ್ಯವಹಾರವಾದ ಸರ್ಕಾರಿ ಜಮೀನುಗಳ ಬಗ್ಗೆ ಎಸ್ಐಟಿ ರಚಿಸಿ ತನಿಖೆ ಮಾಡಿಸುವುದಲ್ಲದೆ, ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದರು.
ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ, ಅದನ್ನು ತನಿಖೆ ಮಾಡುತ್ತೇವೆ. 24 ತಾಸಿನಲ್ಲಿ ಆದೇಶ ಹೊರಡಿಸುತ್ತೇನೆ. ನಕಲಿ ದಾಖಲೆ ಸೃಷ್ಟಿ ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಸುವುದಕ್ಕೆ ತಡೆ ಹಾಕುತ್ತೇವೆ. ಇದರಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ ವರ್ಗಗಳನ್ನು ಹೊಣೆಗಾರನ್ನಾಗಿ ಮಾಡಲಾಗುವುದು. ಅದಕ್ಕೆ ಮಾರ್ಗಸೂಚಿ ಹೊರಡಿಸಿ, ಕಾನೂನು ಬದಲಾವಣೆ ತರುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣ: ವಕೀಲ ಜಗದೀಶ್‌ಗೆ ಜಾಮೀನು ಮಂಜೂರು