ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಯುವತಿಯ ವೈದ್ಯಕೀಯ ಪರೀಕ್ಷೆ ಮುಗಿದಿದ್ದು, ಆಕೆಯನ್ನು ನೇರವಾಗಿ ಆಡುಗೋಡಿ ವಿಚಾರಣಾ ಕೇಂದ್ರಕ್ಕೆ ಎಸ್ಐಟಿ ತನಿಖಾಧಿಕಾರಿಗಳು ಕರೆ ತಂದಿದ್ದಾರೆ.
ಆಸ್ಪತ್ರೆಯಿಂದ ಬಂದ ಕಾರಣ ಕೆಲಹೊತ್ತು ವಿಶ್ರಾಂತಿ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಯುವತಿ ವಾಯ್ಸ್ ಸ್ಯಾಂಪಲ್ ಪಡೆಯಲಿರುವ ಅಧಿಕಾರಿಗಳು, ವರದಿಗಾಗಿ ಎಫ್ಎಸ್ಎಲ್ಗೆ ಕಳುಹಿಸಲಿದ್ದಾರೆ. ನಿನ್ನೆ ಎರಡು ಗಂಟೆಗಳ ಕಾಲ ಯುವತಿಯನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು ಇಂದು ಸಹ ಮುಂದುವರೆಸಲಿದ್ದಾರೆ.
ಇದನ್ನೂ ಓದಿ: ಎಸ್ಐಟಿ ವಿರುದ್ಧ ದೂರು ನೀಡಲು ಮುಂದಾದ ಯುವತಿ ಪರ ವಕೀಲರು
ತನಿಖಾಧಿಕಾರಿಗಳು ಮಹಜರು ಮಾಡುವ ಹಿನ್ನೆಲೆಯಲ್ಲಿ ಮಲ್ಲೇಶ್ವರ ಬಳಿಯ ಮಂತ್ರಿಗ್ರೀನ್ ಅಪಾರ್ಟ್ ಮೆಂಟ್ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ, ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮಂತ್ರಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಎಸ್ಐಟಿ ವಿಚಾರಣೆ ವೇಳೆಯೂ ಸಹ ಇದೆ ರೀತಿ ಹೇಳಿಕೆಯನ್ನು ನೀಡಿದ್ದಾಳೆ. ಹಾಗಾಗಿ ಈ ಸಂಬಂಧ ತನಿಖಾಧಿಕಾರಿ ಕವಿತಾ ನೇತೃತ್ವದಲ್ಲಿ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಹೋಗಿ ಮಹಜರು ಮಾಡಲಾಗುವುದು ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ಒಡೆತನದ ಅಪಾರ್ಟ್ಮೆಂಟ್:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದಲ್ಲಿರೋ ಮಂತ್ರಿ ಗ್ರೀನ್ ಅಪಾರ್ಟ್ಮೆಂಟ್ನ ಫ್ಲಾಟ್ ನಂಬರ್ 1075 ರಲ್ಲಿ ಮಹಜರು ನಡೆಸುವ ಸಾಧ್ಯತೆ. 2019 ರಲ್ಲಿ 3 ಕೋಟಿ 60 ಲಕ್ಷ ಬೆಲೆಬಾಳುವ ಅಪಾರ್ಟ್ಮೆಂಟ್ನನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಖರೀದಿ ಮಾಡಿದ್ದರು.
ಹೇಗಿರಲಿದೆ ಮಹಜರು ಪ್ರಕ್ರಿಯೆ ?:
ಯುವತಿ ಹೇಳಿಕೆಯಂತೆ ಕೃತ್ಯ ನಡೆದ ಸ್ಥಳಕ್ಕೆ ಹೋಗುವ ಎಸ್ಐಟಿ ತಂಡ ಮೊದಲು ಅಪಾರ್ಟ್ಮೆಂಟ್ನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಪ್ಲ್ಯಾಟ್ನಲ್ಲಿ ಸಿಗುವ ವಸ್ತುಗಳು ಹಾಗೂ ಡಿಜಿಟಲ್ ಸಾಧನಗಳಿದ್ದರೆ ಅದನ್ನು ವಶಪಡಿಸಿಕೊಳ್ಳಲಿದ್ದಾರೆ.
ಯುವತಿ ಬಂದ ದಿನಾಂಕ ಹಾಗೂ ಸಮಯದಂತೆ ಅಪಾರ್ಟ್ಮೆಂಟ್ ಸುತ್ತಮುತ್ತಲು ಅಳವಡಿಸಿರುವ ಸಿಸಿಟಿವಿ ಕ್ಯಾಮರ ದೃಶ್ಯಾವಳಿ ವಶಕ್ಕೆ ಪಡೆದುಕೊಳ್ಳಲಿದೆ. ಒಂದು ವೇಳೆ ಸಿಸಿಟಿವಿ ಕ್ಯಾಮರದ ದೃಶ್ಯಾವಳಿ ಡಿಲೀಟ್ ಆಗಿದ್ದರೆ, ಅಪಾರ್ಟ್ಮೆಂಟ್ಗೆ ಬಂದು ಹೋಗುವವರನ್ನು ರಿಜಿಸ್ಟ್ರಾರ್ ಮಾಡಿಕೊಳ್ಳುವ ಲೆಡ್ಜರ್ ಪುಸ್ತಕ ಸಹ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಯುವತಿ ಬಂದ ದಿನದಂದು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಸೇರಿದಂತೆ ಸಂಬಂಧಿತ ವ್ಯಕ್ತಿಗಳ ಹೇಳಿಕೆಯನ್ನು ಎಸ್ಐಟಿ ದಾಖಲಿಸಿಕೊಳ್ಳಲಿದೆ.
ಸಿಡಿ ಲೇಡಿ ಎಂದು ಕರಿಯಬೇಡಿ:
ಆಡುಗೋಡಿ ಟೆಕ್ನಿಕಲ್ ಸೆಂಟರ್ ಬಳಿ ಯುವತಿ ಪರ ವಕೀಲ ಜಗದೀಶ್ ಮಾತನಾಡಿ, ಯುವತಿ ಮೆಡಿಕಲ್ ಚೆಕಪ್ ಮುಗಿದಿದೆ. ತನಿಖಾಧಿಕಾರಿಗಳು ಯುವತಿಯ ವಾಯ್ಸ್ ಸ್ಯಾಂಪಲ್ ಪಡೆದು ಎಫ್ಎಸ್ಎಲ್ಗೆ ಕಳುಹಿಸಲಿದ್ದಾರೆ. ಯುವತಿಯನ್ನು ಕರೆದುಕೊಂಡು ಯಾವಾಗ ಪಂಚನಾಮೆ ಮಾಡುತ್ತಾರೆ ಎಂಬುವುದು ಗೊತ್ತಿಲ್ಲ. ಅದನ್ನು ತನಿಖಾಧಿಕಾರಿಗಳೇ ತಿಳಿಸಬೇಕು ಎಂದರು.ಇದೇ ವೇಳೆ ದಯಮಾಡಿ ಸಿಡಿ ಲೇಡಿ ಹಾಗೂ ಸಿಡಿ ಲೇಡಿ ಪರ ವಕೀಲ ಎಂದು ಕರೆಯಬೇಡಿ ಯುವತಿಯನ್ನು ಸಂತ್ರಸ್ತೆ ಎಂದು ಕರೆಯಿರಿ ಎಂದು ವಕೀಲರು ಮನವಿ ಮಾಡಿದ್ದಾರೆ.