ಬೆಂಗಳೂರು: ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತನ್ನನ್ನು ವಿಚಾರಣೆಗೆ ಕರೆದು ಅವಮಾನ ಮಾಡಿರುವುದಾಗಿ ಆರೋಪಿಸಿ ರೌಡಿಶೀಟರ್ ಸುನೀಲ ಸಲ್ಲಿಸಿದ ಅರ್ಜಿಯ ವಿಚಾರಣೆ ಇವತ್ತು ನ್ಯಾಯಾಲಯದಲ್ಲಿ ನಡೆಯಿತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ, ರಾಜ್ಯ ಸರ್ಕಾರ ಹಾಗೂ ಅಲೋಕ್ ಕುಮಾರ್ ಅವರಿಗೆ ನೋಟಿಸ್ ನೀಡಿದೆ. ಜೊತೆಗೆ ಸುನೀಲನಿಗೆ ಅನಗತ್ಯ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆ ಮುಂದೂಡಿತು.
ಘಟನೆಯ ವಿವರ:
ಲೋಕಸಭಾ ಚುನಾವಣೆಗೂ ಮುನ್ನ ನಗರದಲ್ಲಿ ಸಮಾಜಘಾತುಕ ಶಕ್ತಿಗಳಿಂದ ಅಹಿತಕರ ಘಟನೆಗಳನ್ನು ತಡೆಯುವ ಕಾರಣಕ್ಕೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನಗರದ ಎಲ್ಲಾ ರೌಡಿಗಳನ್ನ ಕರೆದು ಕ್ಲಾಸ್ ತೆಗೆದುಕೊಂಡಿದ್ದರು. ಈ ವೇಳೆ ರೌಡಿಶೀಟರ್ ಸುನೀಲ್, ಅಲೋಕ್ ಕುಮಾರ್ ಅವರನ್ನು ಗುರಾಯಿಸಿ ನೋಡಿ, ಏನ್ ಮಾಡ್ತಿರಾ ಸರ್ ಎಂದಿದ್ದ. ಇದು ಅಲೋಕ್ ಪಿತ್ತ ನೆತ್ತಿಗೇರಿಸಿತ್ತು. ಈ ಸಂದರ್ಭ ಸಿಟ್ಟಾದ ಅವರು, ಈತನ ಕೇಸ್ ರೀ ಓಪನ್ ಮಾಡಿ ಅಂತ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು. ಹಾಗೆಯೇ ಆತನ ಚಲನವಲನಗಳ ಮೇಲೆ ಕಣ್ಣಿಟ್ಟು ಮತ್ತೆ ಕೇಸ್ ರೀ ಫೈಲ್ ಮಾಡಲು ಫ್ಲಾನ್ ಮಾಡಿದ್ದಾರೆ ಎನ್ನಲಾಗಿತ್ತು.