ಬೆಂಗಳೂರು: ದೀಪಾವಳಿ ಹಬ್ಬದ ಸಮಯ ಪಟಾಕಿ ಅನಾಹುತಗಳು ಹೆಚ್ಚಾಗುತ್ತಿದ್ದವು. ಆದರೆ ಈ ಕುರಿತು ಶಾಲಾ ಕಾಲೇಜಿನ ಹಂತದಲ್ಲೇ ಅರಿವು ಮೂಡಿಸುತ್ತಾ ಬಂದಿರುವ ಕಾರಣ ಈ ಬಾರಿಯ ದೀಪಾವಳಿಯಲ್ಲೂ ಪಟಾಕಿಯಿಂದಾಗುವ ಕಹಿ ಘಟನೆಗಳು ಕಡಿಮೆಯಾಗಿವೆ.
ಮೂರು ದಿನಗಳ ದೀಪಾವಳಿ ಹಬ್ಬ ಮುಗಿದಿದ್ದು, ಸಾಮಾನ್ಯವಾಗಿ ಗಲ್ಲಿ ಗಲ್ಲಿಗಳಲ್ಲಿ ಪಟಾಕಿ ಹೊಡೆಯುವ ಸ್ಪರ್ಧೆಯೇ ಇರುತ್ತಿತ್ತು. ಆದರೆ ಈ ಬಾರಿ ಕೋವಿಡ್ ಅದಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಸರ್ಕಾರ ಹಸಿರು ಪಟಾಕಿ ಕಡ್ಡಾಯ ಮಾಡಿದ್ದು, ಪರಿಸರದ ಕಾಳಜಿ ಜೊತೆ ಕೋವಿಡ್ ಕಾರಣಕ್ಕೆ ಪೋಷಕರು ಮಕ್ಕಳನ್ನು ಹೊರಗೆ ಬಿಡೋದಕ್ಕೆ ಹಿಂದು-ಮುಂದು ನೋಡುವಂತಾಗಿತ್ತು. ಇದೇ ಕಾರಣದಿಂದಾಗಿ ಪಟಾಕಿಯಿಂದ ಸಂಭವಿಸುತ್ತಿದ್ದ ಅನಾಹುತಗಳು ಕಡಿಮೆಯಾಗಿವೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ಮಿಂಟೋ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಕಲ್ಪನಾ ಮಾತನಾಡಿದ್ದು, ಕೋವಿಡ್ ಪಿಡುಗಿನಿಂದಾಗಿ ಒಳರೋಗಿಗಳಿಗೆ ಅಂತರ ಕಾಪಾಡಲು ಪ್ರತ್ಯೇಕ ಕೊಠಡಿ ಸ್ಥಾಪಿಸಲಾಗಿತ್ತು. 2 ಮೀಟರ್ ಅಂತರದಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಱಪಿಡ್ ಟೆಸ್ಟ್ ಮಾಡಿಸಿ ತೀವ್ರ ಕಣ್ಣಿನ ಗಾಯಾಳುಗಳಿಗೆ ಚಿಕಿತ್ಸೆ ಶೀಘ್ರದಲ್ಲಿಯೇ ನೀಡಲು ನಿರ್ಧರಿಸಿದ್ದೆವು ಎಂದು ಮಾಹಿತಿ ನೀಡಿದರು.
ಮಿಂಟೋ ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಸಂಬಂಧಿತ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದ್ದು, ಹಿಂದಿನ ವರ್ಷ ಸರಿ ಸುಮಾರು 40 ರಿಂದ 50 ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಆ ಸಂಖ್ಯೆ ಕೇವಲ 11ಕ್ಕೆ ಇಳಿದಿದ್ದು, ಕಳೆದ ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಕೇವಲ 20ರಷ್ಟು ಒಳ ರೋಗಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಇರುವ ಕಾರಣ ಜನರ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಇದರಿಂದ ಪಟಾಕಿ ಕೊಳ್ಳುವಲ್ಲಿ ಜನ ಹಿಂದೇಟು ಹಾಕಿದ್ದಾರೆ. ಹಸಿರು ಪಟಾಕಿ ಬೆಲೆ ದುಬಾರಿ ಇದ್ದಿದ್ದರಿಂದ ಖರೀದಿಸುವುದಕ್ಕೆ ಜನರಿಗೆ ಕಷ್ಟ ಆಗಿದೆ ಎಂದು ಡಾ ಕಲ್ಪನಾ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಾರಿ 3 ರಿಂದ 4 ಜನರ ಕಣ್ಣಿಗೆ ತೀವ್ರ ಗಾಯಗಳಾಗಿವೆ. ಅದರಲ್ಲಿ ಕೆಲವರಿಗೆ ಕಣ್ಣಿನಲ್ಲಿ ತೀವ್ರ ರಕ್ತ ಸ್ರಾವವಾಗಿದ್ದು, ನರದಲ್ಲಿ ತೊಂದರೆ ಕಂಡುಬರದಿದ್ದರೆ ಚಿಕಿತ್ಸೆಯ ನಂತರ ದೃಷ್ಠಿ ಮರಳುವ ಸಾಧ್ಯತೆ ಇದೆ. ಪೂರ್ತಿ ದೃಷ್ಠಿ ಕಳೆದುಕೊಂಡಿರುವವರು ಯಾರೂ ಇಲ್ಲ ಎಂದು ವಿವರಿಸಿದರು.