ಬೆಂಗಳೂರು: ವಿಧಾನಸಭೆಯಲ್ಲಿ ಈಗಾಗಲೇ ಸಿಡಿ ವಿಚಾರ ಪ್ರಸ್ತಾಪಿಸಿ ಗದ್ದಲ ಸೃಷ್ಟಿಸಿರುವ ಕಾಂಗ್ರೆಸ್ ಇದೇ ವಿಚಾರವನ್ನು ನಾಳೆ ವಿಧಾನ ಪರಿಷತ್ನಲ್ಲಿ ಪ್ರಸ್ತಾಪಿಸಲಿದೆ.
ಇಂದಿನ ವಿಧಾನಸಭೆ ಕಲಾಪ ಕೇವಲ ಸಿಡಿ ವಿಚಾರಕ್ಕೆ ಸೀಮಿತವಾಯಿತು. ಮಧ್ಯಾಹ್ನದ ನಂತರ ಅಧಿವೇಶನ ಮುಂದೂಡಿದ ನಂತರ ವಿಧಾನ ಪರಿಷತ್ ಮೊಗಸಾಲೆಗೆ ಭೇಟಿ ಕೊಟ್ಟ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ನಾಯಕರನ್ನು ಕರೆದು ಚರ್ಚಿಸಿದರು.
ವಿಧಾನಸಭೆಯಲ್ಲಿ ಇಂದು ನಾವು ಈ ವಿಚಾರ ಪ್ರಸ್ತಾಪಿಸಿದ್ದು, ಪರಿಷತ್ನಲ್ಲಿ ನಾಳೆ ಬೆಳಗ್ಗೆ ಈ ಮಹತ್ವದ ಚರ್ಚೆಯನ್ನು ಕೈಗೆತ್ತಿಕೊಳ್ಳುವಂತೆ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ಗೆ ಸಿದ್ದರಾಮಯ್ಯ ಇದೇ ಸಂದರ್ಭ ಸೂಚನೆ ನೀಡಿದರು.
ವಿಧಾನ ಪರಿಷತ್ ಮೊಗಸಾಲೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಂಗ್ರೆಸ್ ಸದಸ್ಯರ ಜೊತೆ ಚರ್ಚಿಸಿದ ಅವರು, ಇಂದು ಸಾಕಷ್ಟು ಮಹತ್ವದ ವಿಚಾರಗಳ ಮೇಲಿನ ಚರ್ಚೆ ಇರುವುದರಿಂದ ಅಲ್ಲದೆ ಸಂಜೆ ಕಾಲಾವಕಾಶ ಕೊರತೆ ಇರುವ ಹಿನ್ನೆಲೆ ನಾಳೆ ಬೆಳಗ್ಗೆಯೆ ವಿಚಾರ ಪ್ರಸ್ತಾಪಿಸಿ. ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗಳನ್ನು ಒತ್ತಾಯಿಸುವಂತೆ ಕಾಂಗ್ರೆಸ್ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದು, ಇಂದಿನ ಚರ್ಚೆಯನ್ನು ಮುಗಿಸುತ್ತೇವೆ. ನಾಳೆ ಬೆಳಗ್ಗೆ ಮೊದಲ ಅವಧಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ಕೋರುತ್ತೇವೆ ಎಂದು ಭರವಸೆ ನೀಡಿದರು.