ಬೆಂಗಳೂರು: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಯಾವುದೇ ಸಂದರ್ಭದಲ್ಲಿ ಬೇಕಾದರೂ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿರುವ ಹಿನ್ನೆಲೆ, ಪಕ್ಷದ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ಹೋರಾಡುವ ಸಂದೇಶವನ್ನು ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾಗಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ತಮಗೆ ಕೈಕೊಟ್ಟು ಬಿಜೆಪಿ ಸೇರಿ ಇದೀಗ ಗೆದ್ದು ಸಚಿವರಾಗುವ ಕನಸು ಕಾಣುತ್ತಿರುವ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವನಗೌಡ ತುರವಿಹಾಳ ಅಲ್ಪ ಮತಗಳಿಂದ ಸೋಲನುಭವಿಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪ್ರತಾಪ್ ಗೌಡರನ್ನು ಸೋಲಿಸಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯುವ ಆಶಯವನ್ನು ಪಕ್ಷದ ನಾಯಕರು ಹೊಂದಿದ್ದು, ಇಂದಿನ ಸಭೆಯಲ್ಲಿ ಸಹ ಇದೇ ವಿಚಾರವಾಗಿ ಗಂಭೀರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಶತಾಯಗತಾಯ ಉಪಚುನಾವಣೆ ಗೆಲ್ಲಲೇಬೇಕೆಂದು ಕಾರ್ಯತಂತ್ರ ಹೆಣೆದಿರುವ ಕಾಂಗ್ರೆಸ್ ನಾಯಕರು ವಿಶೇಷ ಕಾಳಜಿ ವಹಿಸಿ ಮಸ್ಕಿ ಭಾಗದ ನಾಯಕರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಇಂದು ಸಹ ಸಿದ್ದರಾಮಯ್ಯ ಮಸ್ಕಿ ಭಾಗದ ಕಾಂಗ್ರೆಸ್ ಮುಖಂಡರನ್ನು ಕರೆಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ನಾಯಕ್, ಶಾಸಕ ಬಸವನಗೌಡ ದದ್ದಲ್, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮುಖಂಡರಾದ ಕರಿಯಪ್ಪ, ಬಸವನಗೌಡ ತುರವಿಹಾಳ, ರವಿ ಭೋಸರಾಜು ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ.. ಪತಿಯ ಡಯಟಿಂಗ್ ಕಿರುಕುಳ: ಗೃಹಿಣಿ ಆತ್ಮಹತ್ಯೆ