ಬೆಂಗಳೂರು: ಪ್ರವಾಹದಿಂದಾಗಿ ರಾಜ್ಯದ ಜನತೆ ತೊಂದರೆಗೆ ಒಳಗಾಗಿರುವ ಹಿನ್ನಲೆಯಲ್ಲಿ ನಾಳೆ ನಗರದಲ್ಲಿ ಬಿಡುಗಡೆಯಾಗಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ' ಗ್ರಂಥ ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇನ್ನೊಂದೆಡೆ ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಸಂಜೆ ನಡೆಯುವ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ರಾತ್ರಿಯೇ ಹಿಂತಿರುವುಗುವುದು ಅನುಮಾನವಾಗಿದೆ. ನಾಳೆ ಬೆಳಗ್ಗೆ ಅವರು ಹಿಂತಿರುಗಲಿದ್ದು, ಬಂದ ಬಳಿಕ ತಮ್ಮ ತವರು ಜಿಲ್ಲೆ ಮೈಸೂರು ಹಾಗೂ ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಹೊಂದಿರುವ ಬಾಗಲಕೋಟೆ ಜಿಲ್ಲೆಗೆ ಭೇಟಿ ಕೊಟ್ಟು, ಜಲ ಪ್ರಳಯದಿಂದ ತೊಂದರೆಗೀಡಾದ ಪ್ರದೇಶ ವೀಕ್ಷಿಸಲಿದ್ದಾರೆ. ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಇದೆ.
ಇಂದು ಸಭೆ:
ಎಐಸಿಸಿ ಅಧ್ಯಕ್ಷರ ಆಯ್ಕೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಿದ್ದರಾಮಯ್ಯ ಅವರ ಜೊತೆ ಇತರೆ ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ.
ದಿನೇಶ್ ಗುಂಡೂರಾವ್ ಪ್ರವಾಸ:
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಹವಾಲು ಸ್ವೀಕರಿಸಲಿದ್ದಾರೆ. ಅಗಸ್ಟ್ 11 ಮತ್ತು 12ರ ಕಾರ್ಯಕ್ರಮ ಕೂಡ ಕಾಯ್ದಿರಿಸಲಾಗಿದ್ದು, ಮಳೆಯಿಂದಾಗಿ ತೊಂದರೆಗೀಡಾಗಿರುವ ಇತರೆ ಜಿಲ್ಲೆಗೂ ಭೇಟಿಕೊಡುವ ಸಾಧ್ಯತೆ ಇದೆ.