ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸುಗರ್ ಕಂಪನಿಯನ್ನು ಖಾಸಗಿಯವರಿಗೆ ಮಾರುವುದು ಬೇಡ ಎಂದು ಸಿಎಂ ಬಿ ಎಸ್ ಯಡಿಯೂರಪ್ಪರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಸಾವಿರಾರು ಕೋಟಿ ಮೌಲ್ಯವುಳ್ಳ ಈ ಕಂಪನಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು. ಸರ್ಕಾರ ಒಂದಿಷ್ಟು ಬಂಡವಾಳವನ್ನು ನೀಡಿ ಕಾರ್ಖಾನೆಯನ್ನು ಆಧುನಿಕರಣ ಮಾಡಿ ಇನ್ನಷ್ಟು ಸಶಕ್ತಗೊಳಿಸಬೇಕು. ಈ ಮೂಲಕ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೆಚ್ಚು ಮಾಡಿ, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಮತ್ತು ಹಳೆ ಮೈಸೂರು ಭಾಗದ ಕಬ್ಬು ಬೆಳೆಗಾರರನ್ನು ಸಂರಕ್ಷಿಸಬೇಕು ಮತ್ತು ಸಕ್ಕರೆ ಉತ್ಪಾದನೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತೇನೆ. ದೀರ್ಘ ಇತಿಹಾಸವಿರುವ ಮಂಡ್ಯ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನ ಗೊಳಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಒಡೆಯರ್ ಕನಸು: ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ವಿಶೇಷ ಆಸಕ್ತಿಯಿಂದಾಗಿ 1933ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಆರಂಭಗೊಂಡಿತು. ಮುಂದೆ ಇದನ್ನು ಮೈಶುಗರ್ ಕಾರ್ಖಾನೆ ಎಂದು ಕರೆಯಲಾಯಿತು. ಕರ್ನಾಟಕದ ಮೊಟ್ಟ ಮೊದಲ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಮೈಶುಗರ್ ಮೊದಲ ಸರ್ಕಾರಿ ಸಕ್ಕರೆ ಕಾರ್ಖಾನೆ. ಕಾರ್ಖಾನೆಯು ಹಳೇ ಮೈಸೂರು ಭಾಗದ ಕಬ್ಬು ಬೆಳೆಗಾರರ ಬದುಕನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಸುಧಾರಿಸಿತು ಎಂದು ವಿವರಿಸಿದ್ದಾರೆ.
ಇದರಲ್ಲಿ ಸುಮಾರು 14,046 ರೈತರು ಷೇರುದಾರರಾಗಿರುತ್ತಾರೆ. ಪ್ರತಿನಿತ್ಯ ಸುಮಾರು 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಕಾರ್ಖಾನೆಗಿದೆ. ಹಿಂದೆ ವಾರ್ಷಿಕ 9.00 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಈ ಕಾರ್ಖಾನೆ ಅರೆಯುತ್ತಿತ್ತು. ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 83,831 ಎಕರೆ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಕಬ್ಬನ್ನು ಬೆಳೆಯುತ್ತಾರೆ. ಈ ಕಾರ್ಖಾನೆಯು ಕೋ-ಜನರೇಷನ್, ಡಿಸ್ಟಿಲರಿ, ಗ್ಲೂಕೋಸ್, ಚಾಕೊಲೇಟ್ ಮತ್ತು ಎಥೆನಾಲ್‌ನಂತಹ ಉತ್ಪನ್ನಗಳನ್ನು ನಿರಂತರ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಂಪನಿ ಶೇ. 20ರಿಂದ 30 ಷೇರು ಡಿವಿಡೆಂಟ್‌ನ 18ವರ್ಷಕ್ಕೂ ಹೆಚ್ಚು ಕಾಲ ನೀಡಿರುವ ಹೆಗ್ಗಳಿಕೆಯ ಇತಿಹಾಸವಿದೆ. 14ಕ್ಕೂ ಹೆಚ್ಚು ಫರ್ಮ್‌ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳನ್ನು ಹೊಂದಿರುವ ಈ ಕಂಪನಿಯು ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 207 ಎಕರೆಗಿಂತ ಹೆಚ್ಚು ಭೂಮಿ ಹೊಂದಿದೆ ಎಂದಿದ್ದಾರೆ.
ನಗರ, ಪಟ್ಟಣ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ: ರೈತರ ಬದುಕನ್ನು ಸುಧಾರಿಸಿ ಮಂಡ್ಯದಂತಹ ನಗರ, ಪಟ್ಟಣಗಳು ರೂಪುಗೊಳ್ಳುವಲ್ಲಿ ಈ ಕಾರ್ಖಾನೆ ಪಾತ್ರ ಮಹತ್ವದ್ದಾಗಿದೆ. ಹಳೆ ಮೈಸೂರು ಭಾಗದ ಇಂತಹ ದೀರ್ಘ ಇತಿಹಾಸವುಳ್ಳ ಮೈಸೂರು ಶುಗರ್ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ದುರಾದೃಷ್ಟಕರ ಸಂಗತಿ. ಇದು ಸರಿಯಾದ ಕ್ರಮವಲ್ಲ. ಈ ಹಿಂದೆ ತಮ್ಮ ಅಧಿಕಾರಾವಧಿ 2013 ರಿಂದ 18-19ರವರೆಗೆ ಸುಮಾರು 229.65 ಕೋಟಿ ರೂ.ಗಳನ್ನು ನೀಡಿ ಈ ಕಂಪನಿಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗಿತ್ತು ಎಂದಿದ್ದಾರೆ.