ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದಿದ್ದಾರೆ.
ಕೊಬ್ಬರಿಯ ಬೆಂಬಲ ಬೆಲೆ ಪರಿಷ್ಕರಿಸುವಂತೆ ಇಂದು ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ವರ್ಷ ಪ್ರತೀ ಕ್ವಿಂಟಾಲ್ ಬೆಲೆ 15ರಿಂದ 17 ಸಾವಿರ ರೂ. ಇತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ ಬೆಲೆ ತೀವ್ರವಾಗಿ ಕುಸಿದಿದೆ. ಪ್ರಸ್ತುತ ಮಾರುಕಟ್ಟೆ ದರ ಶೇ. 43ರಷ್ಟು ಕುಸಿದಿದೆ. ಪ್ರತಿ ಕ್ವಿಂಟಾಲ್ಗೆ 8700ರಿಂದ 9500 ರೂ. ಇದೆ. ಎಂಎಸ್ಪಿ ದರ 10,300 ರೂ. ನಿಗದಿ ಪಡಿಸಿದ್ದೀರಾ. ಆದರೆ ಇದಕ್ಕಿಂತ ಕೊಬ್ಬರಿ ಸಂಸ್ಕರಣೆ, ಒಣಗಿಸುವುದಕ್ಕೆ ಹೆಚ್ಚು ಖರ್ಚಾಗಲಿದೆ ಎಂದಿದ್ದಾರೆ.
ಹೀಗಾಗಿ ಪ್ರತೀ ಕ್ವಿಂಟಾಲ್ಗೆ 12,000 ರೂ. ಮಾಡಿ ಹಾಗೂ ಪ್ರೋತ್ಸಾಹಧನವಾಗಿ 4 ಸಾವಿರ ಸೇರಿಸಿ ಒಟ್ಟು 16,000 ರೂ.ಗಳನ್ನ ರೈತರಿಗೆ ನೀಡಿ. ಕೊಬ್ಬರಿಗೆ ಇನ್ನೂ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಿ ಎಂದು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.