ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಬಿಟ್ಟು ಇದೀಗ ಚಾಮರಾಜಪೇಟೆಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯಗೆ ತಾವು ಗೆಲ್ಲುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆ ಮುಸ್ಲಿಂ ಮತದಾರರು ಬಹುಸಂಖ್ಯೆಯಲ್ಲಿರುವ ಚಾಮರಾಜಪೇಟೆಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ಪಾಲ್ಗೊಂಡಿದ್ದ ಸಮಾರಂಭದ ವೇದಿಕೆಯಲ್ಲಿ ಈ ಇಂಗಿತವನ್ನು ವ್ಯಕ್ತಪಡಿಸಿದರು. ಚಾಮರಾಜಪೇಟೆಗೆ ಪದೇ ಪದೆ ಭೇಟಿ ವಿಚಾರ ಕುರಿತು ತಾವಾಗಿಯೇ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಪದೇ ಪದೆ ಜಮೀರ್ ಖಾನ್ ಕರೆಯುತ್ತಿದ್ದಾರೆ. ಅದಕ್ಕೆ ಚಾಮರಾಜಪೇಟೆಗೆ ಬರ್ತಿದ್ದೇನೆ. ಜಮೀರ್ ಖಾನ್ ಬಂದು ಇಲ್ಲಿಂದ ಎಲೆಕ್ಷನ್ಗೆ ನಿಲ್ಲುವಂತೆ ಕೇಳಿದ್ದಾರೆ. ಆದರೆ, ಮಾಧ್ಯಮದವರು ಯಾಕೆ ಇಲ್ಲಿಗೆ ಬರ್ತಾನೇ ಇರ್ತೀರಾ ಅಂತಿದ್ದಾರೆ. ನಾನು ಸದ್ಯ ಬಾದಾಮಿಯಲ್ಲೇ ಇದ್ದೇನೆ ಎಂದರು.
ಬೆಂಬಲಿಗರಿಂದ ಒತ್ತಾಯ;
ಈ ವೇಳೆ ನೀವು ಚಾಮರಾಜಪೇಟೆಗೆ ಬರಬೇಕು. ತಾವು ಇಲ್ಲಿಂದಲೇ ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯಗೆ ಜಮೀರ್ ಬೆಂಬಲಿಗರು, ಕಾರ್ಯಕರ್ತರು ಒತ್ತಾಯ ಮಾಡಿದರು. ಆಯ್ತು ಈಗ ಬಾದಾಮಿಯಲ್ಲಿ ಇದ್ದೇನೆ. ಆಮೇಲೆ ಅದರ ಬಗ್ಗೆ ಯೋಚನೆ ಮಾಡೋಣ ಎಂದು ಹೇಳುವ ಮೂಲಕ ಚಾಮರಾಜಪೇಟೆಯತ್ತ ಆಸಕ್ತಿ ಇರುವುದನ್ನು ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಚಾಮರಾಜಪೇಟೆಯಲ್ಲಿ ನಡೆಯುವ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಸಿದ್ದರಾಮಯ್ಯ ಮುಂದೆ ಇಲ್ಲಿಂದಲೇ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಈ ವಿಚಾರವನ್ನು ಅವರೇ ಪ್ರಸ್ತಾಪಿಸಿ ತಮಾಷೆ ವ್ಯಕ್ತಪಡಿಸುವ ಮೂಲಕ ಚಾಮರಾಜಪೇಟೆಯೇ ಆಯ್ಕೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.