ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರು ಹಾಗೂ ಸಂಸದರಿಗೆ ಇಂದು ಮಧ್ಯಾಹ್ನ ಭೋಜನಕೂಟ ಆಯೋಜನೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಈ ಕೂಟ ಆಯೋಜನೆಗೊಂಡಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ವಿಧಾಸಭೆಯಲ್ಲಿ ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಸುತ್ತಿದೆ. ಇದೇ ವಿಚಾರವಾಗಿ ಇಂದಿನ ಭೋಜನಕೂಟದ ವೇಳೆ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಯಾವ ರೀತಿಯ ಯೋಜನೆ ರೂಪಿಸಬೇಕು ಎಂಬುದರ ಕುರಿತು ಸಹ ಚರ್ಚೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡಿದ ಕಾಂಗ್ರೆಸ್
ಮಸ್ಕಿ, ಬಸವಕಲ್ಯಾಣದ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಗೆಲುವಿನ ರಣತಂತ್ರ ಹೆಣೆಯುವ ಉದ್ದೇಶದಿಂದ ಕೂಡ ಈ ಡಿನ್ನರ್ ಪಾರ್ಟಿ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಐವರು ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರನ್ನು ಕೂಡ ಆಹ್ವಾನಿಸಲಾಗಿದ್ದು, ಅವರು ಕೂಡ ಭಾಗಿಯಾಗಲಿದ್ದಾರೆ.