ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರ ಚರ್ಚೆಗೆ ಕಾರಣವಾಯಿತು.
ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿದ್ದು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೂಡ ಪ್ರಮುಖ ವಿಚಾರಗಳಲ್ಲಿ ಒಂದಾಗಿ ಚರ್ಚೆಯಾಯಿತು.
ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಇದು ಮುಂದೆ ಕರಾಳ ಶಾಸನವಾಗಲಿದೆ. ಪಕ್ಷ ಮೊದಲಿನಿಂದಲೂ ಗೇಣಿದಾರರನ್ನು ರಕ್ಷಿಸಿಕೊಂಡು ಬಂದಿತ್ತು. ಇದರ ವಿರುದ್ಧ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು. ಇದಕ್ಕೆ ಶಾಸಕರು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಚೀನಾದೊಂದಿಗೆ ನಡೆದ ಘರ್ಷಣೆಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ಶೌರ್ಯ, ತ್ಯಾಗ, ಬಲಿದಾನ ಸದಾ ಸ್ಮರಣೀಯ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಮ್ಮ ಸೇನೆ ಅತ್ಯಂತ ಶಕ್ತಿಶಾಲಿಯಾಗಿದೆ. ಆದರೆ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಧಾನಿಯವರ ಮೌನ ಸರಿಯಲ್ಲ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ಏರಿಕೆಯಾಗುತ್ತಿದೆ. ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಲೀಟರ್ಗೆ 25-30 ರೂ. ಪ್ರಕಾರ ಮಾರಾಟವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ದರ ಏರಿಕೆ ಮೂಲಕ ಮಧ್ಯಮ ವರ್ಗದವರನ್ನು ಬಲಿ ಹಾಕಲು ಹೊರಟಿದೆ. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ದೇಶದ ಆರ್ಥಿಕತೆ ಮತ್ತು ಜನರ ಆರೋಗ್ಯವನ್ನು ಹಾಳು ಮಾಡಲು ಹೊರಟಿದೆ ಎಂದರು.
ಕೇಂದ್ರ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಜೈಲ್ ಭರೋ ಚಳವಳಿ ನಡೆಸಲಾಗುವುದು. ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ಈಗ ದಿನಾಂಕ ನಿಗದಿಯಾಗಿದೆ. ಜುಲೈ 2ರಂದು ಪದಗ್ರಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಶಾಸಕರು ಈ ಸಂಬಂಧ ತಮ್ಮ ಕ್ಷೇತ್ರಗಳಲ್ಲಿ ತಯಾರಿ ಮಾಡಿಕೊಳ್ಳಬೇಕು ಎಂದು ವಿವರಿಸಿದರು. ವಿಧಾನ ಪರಿಷತ್ ಚುನಾವಣೆಗೆ ಆಭ್ಯರ್ಥಿಗಳಾಗಿರುವ ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್ ಅವರಿಗೆ ಆಭಿನಂದನೆಗಳು. ಅವರನ್ನು ಆಯ್ಕೆ ಮಾಡಿರುವ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕೃತಜ್ಞತೆಗಳು ಎಂದರು. ಇದೇ ಸಂದರ್ಭ ಪಕ್ಷದ ಎಲ್ಲಾ ಸದಸ್ಯರು ಇಬ್ಬರು ಅಭ್ಯರ್ಥಿಗಳನ್ನು ಅಭಿನಂದಿಸಿದರು.