ಬೆಂಗಳೂರು: ಬೆಳೆ ಹಾನಿ ಬಗ್ಗೆ ನಾನು ಪ್ರಸ್ತಾಪ ಮಾಡಿದ ಮೇಲೆ ಸಿಎಂ ಕಾಟಾಚಾರಕ್ಕೆ ಮಳೆಯಿಂದಾದ ಹಾನಿ ಪ್ರದೇಶಗಳಿಗೆ ಹೋಗಿ ಬರ್ತಿದ್ದಾರೆ. ಜನರ ಕಷ್ಟಕ್ಕಿಂತ ಅವರಿಗೆ ಚುನಾವಣಾ ಪ್ರಚಾರವೇ ಮುಖ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah outrage against cm Bommai) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಿಂಗಾರು ಮಳೆ ಜಾಸ್ತಿ ಆಗಿದೆ. ಪರಿಣಾಮ ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿ (Five lakh hectares of crop damage) ಆಗಿದೆ. ಕೃಷಿ ಇಲಾಖೆಯವರೇ ಈ ಮಾಹಿತಿ ಹೇಳ್ತಿರುವುದು. ರಾಗಿ, ಜೋಳ, ಕಾಫಿ, ಶೇಂಗಾ, ಭತ್ತ ಹಾನಿಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಹಾನಿಯಾಗಿರುವುದರ ಬಗ್ಗೆ ಮಾಹಿತಿ ತೆಗೆದುಕೊಂಡಿಲ್ಲ. ಮನೆಗಳು ಬಿದ್ದಿವೆ, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಆದ್ರೆ ಸರ್ಕಾರ ನಷ್ಟದ ಬಗ್ಗೆ ಒಂದು ರಿಪೋರ್ಟ್ ಪಡೆದಿಲ್ಲ. ಇಲ್ಲಿಯವರೆಗೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಜನಸ್ವರಾಜ್ ಯಾತ್ರೆ ಮಾಡ್ತಿದ್ದಾರೆ. ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾಡಿದ್ದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಪ್ರವಾಸ ಹೋಗ್ತಿರುವುದಾಗಿ ತಿಳಿಸಿದರು.
ರೈತರ ಬೆಳೆ ಹಾನಿಗೆ ಪರಿಹಾರ ಕೊಡಲು ನೀತಿ ಸಂಹಿತೆ ಅಡ್ಡಿಬರಲ್ಲ. ಬಿ ಸಿ ಪಾಟೀಲ್ಗೆ ಅಡ್ಡಿಬರುತ್ತೆ ಅನ್ನೋದಾದ್ರೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಲಿ. ರೈತರಿಗೆ ಪರಿಹಾರ ಕೊಡಲು ಯಾವುದೇ ನೀತಿ ಸಂಹಿತೆ ಅಡ್ಡಿಬರಲ್ಲ. ಮೊದಲು ಪರಿಹಾರ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.
ಹಿಂಗಾರು ಮಳೆ ಹೆಚ್ಚಾಗಿ 5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಕಂದಾಯ ಇಲಾಖೆ ನಿನ್ನೆಯವರೆಗೆ 3 ಲಕ್ಷ ಎಂದಿದೆ. ಆದ್ರೆ ಇಲ್ಲಿಯವರೆಗೆ 12 ಲಕ್ಷ ಹೆಕ್ಟೇರ್ ಹಾಳಾಗಿದೆ. ಜನರ ಕಷ್ಟ ಇವರಿಗೆ ಬೇಕಿಲ್ಲ. ಜನಸ್ವರಾಜ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಶಂಖ ಊದಿಕೊಂಡು ಓಡಾಡ್ತಿದ್ದಾರೆ. ಸಚಿವರಿಗೆ ಸರಿಯಾಗಿ ಜಿಲ್ಲೆಯ ಉಸ್ತುವಾರಿ ಕೊಟ್ಟಿಲ್ಲ. ಇವತ್ತು ಆಡಳಿತ ಕುಸಿದು ಹೋಗಿದೆ. ಸರ್ಕಾರ ಜನರತ್ತ ಗಮನಹರಿಸಿಲ್ಲ ಎಂದು ಕಿಡಿಕಾರಿದರು.
ಹಿಂದೆ ಸಿದ್ದರಾಮಯ್ಯ ಬಾದಾಮಿಗೆ ಹೋಗಿರಲಿಲ್ಲವೆಂಬ ಬಿಜೆಪಿ ನಾಯಕರ ಆರೋಪ ಕುರಿತು ಮಾತನಾಡಿ, ಆಗ ಕಣ್ಣು ನೋವು ಇತ್ತು. ಅವರು ಹೋಗಿಲ್ಲ ಅಂದ್ರೆ ನಾನು ಹೇಳೋಕೆ ಆಗುತ್ತಾ? ಯಾರೋ ಮಾತನಾಡ್ತಾರೆ ಅಂತ ಉತ್ತರ ಕೊಡೋಕೆ ಸಾಧ್ಯವೇ? ಆರ್. ಅಶೋಕ್ ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿಲ್ಲ. ನಾನು ಟೀಕೆ ಮಾಡಲಿಲ್ಲ. ವಸ್ತು ಸ್ಥಿತಿ ಏನಿದೆ ಅಂತ ಹೇಳಿದ್ದೆ ಅಷ್ಟೇ ಎಂದರು.
ಕೆ.ಸಿ ಕೊಂಡಯ್ಯಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯರ ವಿರೋಧದ ವಿಚಾರ ಕುರಿತು ಮಾತನಾಡಿ, ಬಳ್ಳಾರಿಯಲ್ಲಿ ಕೆ. ಸಿ ಕೊಂಡಯ್ಯಗೆ ಟಿಕೆಟ್ ನೀಡುವುದು ಬೇಡ ಎಂದು ಸ್ಥಳೀಯರು ಹೇಳಿದ್ದಾರೆ. ಟಿಕೆಟ್ ನೀಡುವುದಕ್ಕೆ ಸ್ಥಳೀಯ ಶಾಸಕರ ವಿರೋಧವಿದೆ. ಕೆ.ಸಿ ಕೊಂಡಯ್ಯ ಅವರು ನಮ್ಮನ್ನು ಬಿಟ್ಟು ನೇರವಾಗಿ ಮತದಾರರ ಬಳಿ ಹೋಗುತ್ತಾರೆ. ಹಾಗಾಗಿ, ಅವರಿಗೆ ಟಿಕೆಟ್ ಬೇಡ ಎಂದು ಹೇಳಿದ್ದಾರೆ. ಆದರೆ, ಎಲ್ಲದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕರಿಗೆ ಸುರ್ಜೇವಾಲಾ ಕರೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿದರು. ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿದರು. ಪಟ್ಟಿ ರಿಲೀಸ್ ಮಾಡುವ ಬಗ್ಗೆ ಹಾಗೂ ಗೊಂದಲವಿದ್ದ ಕ್ಷೇತ್ರದ ಬಗ್ಗೆ ಸಲಹೆ ನೀಡಿದರು. ಕ್ಯಾಂಡಿಡೇಟ್ ಹೆಸರು ಹೇಳಿದ ಸಿದ್ದರಾಮಯ್ಯ ಅವರಿಂದ ಸುದೀರ್ಘ ಮಾಹಿತಿ ಪಡೆದರು.
ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ 6 ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸ: ಹೆಚ್.ಡಿ.ಕುಮಾರಸ್ವಾಮಿ