ಬೆಂಗಳೂರು : ಬಿಜೆಪಿಯವರಿಗೆ ಸುಳ್ಳು ಹೇಳಿ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟುವ ರೋಗ ಹಿಡಿದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು. ಅವರು ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಹಾಕಲಿ ಬೇಡ ಅನ್ನಲ್ಲ, ಆದರೆ, ಟಿಪ್ಪು ಫೋಟೋ ತೆಗೀತಾರೆ. ಹೀಗೆ ಮಾಡಿದ್ರೆ ಗಲಭೆ ಆಗಲ್ವಾ..? ಎಂದು ಪ್ರಶ್ನಿಸಿದರು.
ಈಶ್ವರಪ್ಪ ಅವರು ಕಾಂಗ್ರೆಸ್ ಬಗ್ಗೆ ಆರೋಪ ಮಾಡ್ತಾನೆ ಇರ್ತಾರೆ. ತಪ್ಪು ಅವರು ಮಾಡಿ ಕಾಂಗ್ರೆಸ್ ಮೇಲೆ ಹಾಕ್ತಾರೆ. ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುತ್ತಾರೆ. ಘಟನೆಯಲ್ಲಿ ಎಸ್ಡಿಪಿಐ ಅವರ ಕೈವಾಡ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಎಸ್ಡಿಪಿಐ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎನ್ನುತ್ತಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಕ್ರಮ ಕೈಗೊಳ್ಳಿ. ಇಬ್ಬಂದಿ ರಾಜಕೀಯ ಮಾಡಬೇಡಿ. ಸಿಎಂ ಪ್ರವೀಣ್ ಮನೆಗೆ ಮಾತ್ರ ಹೋಗುತ್ತಾರೆ. ಇನ್ನಿಬ್ಬರ ಮನೆಗೆ ಯಾಕೆ ಹೋಗಲ್ಲ? ಸರ್ಕಾರದ ದುಡ್ಡು ಅಲ್ವ, ತೆರಿಗೆ ಹಣ ಅಲ್ವ. ಅವರಿಬ್ಬರಿಗೂ ಪರಿಹಾರ ಕೊಡಬೇಕಲ್ವಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಸವರಾಜ್ ಬೊಮ್ಮಾಯಿ ಆರ್ಎಸ್ಎಸ್ ಕೈಗೊಂಬೆ : ಜಾಹೀರಾತಿನಲ್ಲಿ ನೆಹರು ಫೋಟೋ ಬಿಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾಹೀರಾತಲ್ಲಿ ನೆಹರು ಫೋಟೋನೇ ಹಾಕಿಲ್ಲ. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು? ಬಿಜೆಪಿ ಅವರದ್ದು ನಕಲಿ ದೇಶಭಕ್ತಿ. ಇವರು ಆರ್.ಎಸ್.ಎಸ್ ಕೈಗೊಂಬೆ ಆಗಿರೋರು ಮತ್ತೇನು ಹೇಳ್ತಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರ್.ಎಸ್ ಎಸ್ ಕೈಗೊಂಬೆಯಾಗಿದ್ದಾರೆ (He was puppet in the RSS hand) ಎಂದರು.
ಅವಕಾಶ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲೀ ಎಂಬ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಶ್ರೀರಾಮುಲು, ಈ ಈಶ್ವರಪ್ಪ ಬಗ್ಗೆ ನಾನೇನೂ ಮಾತನಾಡಲ್ಲ, ಏನೇನೋ ಮಾತನಾಡುತ್ತಾರೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಸರಿಯಾಗಿರಲಿ: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಸರ್ಕಾರ ಕಾನೂನು ಬಿಗಿಮಾಡಬೇಕು. ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಡಬೇಕು. ರಾಜ್ಯದಲ್ಲಿ ದಕ್ಷ ಅಧಿಕಾರಿಗಳು ಇದ್ದಾರೆ. ಅವರಿಗೆ ಪೂರ್ಣ ಪ್ರಮಾಣದ ಅಧಿಕಾರ ಕೊಡಬೇಕು ಎಂದರು.
ಇನ್ನು ಬಿಜೆಪಿಯವರು ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ. ಹಲಾಲ್, ಹಿಜಾಬ್ ಹಲವು ವಿಚಾರವನ್ನು ಸರ್ಕಾರಕ್ಕೆ ನಿಯಂತ್ರಣ ಮಾಡಲಿಲ್ಲ. ಸಹಜವಾಗಿ ಕಾನೂನು ಸುವ್ಯವಸ್ಥೆ ಹಾಳು ಆಗುತ್ತದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇವರು ಹೇಳಿಕೆ ಕೊಡುತ್ತಾ ಇದ್ದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಾ ಇರುತ್ತದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಇನ್ನು ಎಸ್ಡಿಪಿಐ ಬ್ಯಾನ್ ಮಾಡಬೇಕು ಎಂದು ಬಿಜೆಪಿ ವಿರೋಧ ಪಕ್ಷದಲ್ಲಿರುವಾಗ ಹೇಳುತ್ತಾ ಇದ್ದರು. ಈಗ ಎಸ್ಡಿಪಿಐ ಇದ್ದರೆ ಕಾಂಗ್ರೆಸ್ ಮತ ವಿಂಗಡಣೆ ಆಗುತ್ತೆ. ಹಾಗಾಗಿ ಎಸ್ಡಿಪಿಐಯನ್ನು ಬಿಜೆಪಿ ಉಳಿಸಿಕೊಳ್ತಾ ಇದೆ. ಎಸ್ಡಿಪಿಐ ಮತ್ತು ಸಂಘ ಪರಿವಾರ ಒಂದೇ ಎಂದು ಹೇಳಿದರು.
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆ ಅವರೇ ನಿಮಗೆ ಮಹಿಳೆಯರ ಬಗ್ಗೆ ಗೌರವ ಇಲ್ಲವೇ.. ಶಾಸಕ ಪಾಟೀಲ್ ಪ್ರಶ್ನೆ