ಬೆಂಗಳೂರು: ಕೋವಿಡ್ -19 ಮಹಾಮಾರಿ ರೋಗ ನಿಯಂತ್ರಣ ಮಾಡಲು ಮೊದಲ ದಿನದಿಂದಲೂ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷ ರ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜನವರಿಯಲ್ಲಿ ಈ ರೋಗ ಕೇರಳದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಹೀಗಾಗಿ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನ ಕೈಗೊಳ್ಳಲು 2 ತಿಂಗಳಷ್ಟು ಸಮಯ ಇತ್ತು. ಅಂತಾರಾಷ್ಟ್ರೀಯ ವಿಮಾನಗಳನ್ನು ಕೂಡಲೇ ಬಂದ್ ಮಾಡಿದರೆ, ದೇಶದಲ್ಲಿ ಈ ರೋಗ ಇಷ್ಟೊಂದು ಹರಡುತ್ತಿರಲಿಲ್ಲ. ಇದನ್ನ ಕೇಂದ್ರ ಸರ್ಕಾರ ಮಾಡಲಿಲ್ಲ, ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಒತ್ತಡ ತರಲಿಲ್ಲ ಎಂದರು.
ತಬ್ಲಿಘಿಗಳಿಂದ ಸಮಸ್ಯೆ ಆಗಿಲ್ಲ:
ತಬ್ಲಿಘಿಗಳಿಂದ ದೇಶದಲ್ಲಿ ರೋಗ ಬಂದಿದೆ ಅಂತಾ ರಾಜಕೀಯ ಬಣ್ಣ ಹಚ್ಚಲಾಗ್ತಿದೆ. ಹಾಗಾದ್ರೆ ಇಟಲಿಯಲ್ಲಿ ತಬ್ಲಿಘಿಗಳಿದ್ದಾರಾ? ತಬ್ಲಿಘಿಗಳ ಸಮಾವೇಶಕ್ಕೆ ಅನುಮತಿ ಕೊಟ್ಟವರು ಯಾರು? ತಬ್ಲಿಘಿಗಳ ಸಮಾವೇಶ ನಡೆಯುವ ಅಷ್ಟರಲ್ಲಿ ದೇಶದಲ್ಲಿ ರೋಗ ಬಂದಿತ್ತು. ಹಾಗಿದ್ರೂ ಸಮಾವೇಶಕ್ಕೆ ಅನುಮತಿ ಯಾಕೆ ಕೊಟ್ರು? ಇದ್ರಲ್ಲಿ ಕೋಮುವಾದಿ ಹುನ್ನಾರ ಇದೆ. ಲಾಕ್ಡೌನ್ ಮುಂಚಿತವಾಗಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.
ಲಾಕ್ಡೌನ್ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಎಲ್ಲ ರಾಜ್ಯಗಳಲ್ಲೂ ವಲಸೆ ಹೋಗ್ತಿದ್ದಾರೆ. ಐದೂವರೆ ಲಕ್ಷ ಜನ ಆನ್ಲೈನ್ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ರಾಜ್ಯಬಿಟ್ಟು ಹೋಗ್ತಿದ್ದಾರೆ. 60 ಸಾವಿರ ಜನರಿಗೆ ರಾಜ್ಯ ಬಿಟ್ಟು ಹೋಗಲು ಪರ್ಮಿಷನ್ ಕೊಟ್ಟಿದ್ದಾರೆ. ಅವ್ರಿಂದಲೂ ಹಣ ವಸೂಲಿ ಮಾಡ್ತಿದ್ದಾರೆ. ಕೂಲಿ ಕಾರ್ಮಿಕರ ಬಳಿ ದುಡ್ಡು ಎಲ್ಲಿ ಇರುತ್ತೆ? ಅಂತಹವರಿಗೆ ಉಚಿತ ರೈಲ್ವೆ ಪ್ರಯಾಣ ವ್ಯವಸ್ಥೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ 35 ಸಾವಿರ ಕೋಟಿ ಫಂಡ್ ಬಂದಿದೆ. ಅದ್ರಲ್ಲಿ ಒಂದು ಸಾವಿರ ಕೋಟಿ ಖರ್ಚು ಮಾಡಿದಿದ್ರೆ ಆಗ್ತಿರ್ಲಿಲ್ವಾ? ಏನ್ ರೋಗ ಇವ್ರಿಗೆ. ನರೇಂದ್ರ ಮೋದಿ ಅವರು ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಅಂತಾರೆ. ಅದ್ರಿಂದ ಸಮಸ್ಯೆಗಳು ಬಗೆಹರಿಯುತ್ತಾ? ಇಲ್ಲಿಂದ ಹೊರ ರಾಜ್ಯಕ್ಕೆ ಹೋಗೋರಿಗೆ, ಹೊರಗಡೆಯಿಂದ ನಮ್ಮ ರಾಜ್ಯಕ್ಕೆ ಬರೋರಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೂಕ್ತ ಸೌಲಭ್ಯ ಕಲ್ಪಿಸಿದ್ದರೆ 6-7 ಲಕ್ಷ ಜನ ರಾಜ್ಯದಿಂದ ಹೊರ ಹೋಗಲು ಬಯಸುತ್ತಿರಲಿಲ್ಲ. ಸರ್ಕಾರ 60 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಿದೆ. ಬಡವರಿಗೆ, ಕಾರ್ಮಿಕರಿಗೆ ರಾಜ್ಯ ಸರ್ಕಾರ ಸೂಕ್ತ ಆಹಾರ ನೀಡಿಲ್ಲ. ನಮ್ಮ ಪಕ್ಷದವರೂ ಸೇರಿದಂತೆ ಶಾಸಕರು, ಎನ್ಜಿಒ ಗಳು ಶೇ.90 ರಷ್ಟು ಮಂದಿಗೆ ಆಹಾರ ಪೂರೈಸಿದ್ದಾರೆ. ಇದಾಗದಿದ್ದರೆ ಹಲವರು ಹಸಿವಿನಿಂದಲೇ ಸಾಯುತ್ತಿದ್ದರು. ಪ್ರತಿಪಕ್ಷಗಳ ಮನವಿಗೆ ಬೆಲೆ ಕೊಡಲಿಲ್ಲ. ಈ ಮಧ್ಯೆ ಗಾಯದ ಮೇಲೆ ಉಪ್ಪು ಸುರಿದಂತೆ ಎಪಿಎಂಸಿ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು.