ಬೆಂಗಳೂರು: ಹಣದುಬ್ಬರ ನಿಯಂತ್ರಿಸಲಾಗದ ಬಿಜೆಪಿ ಸರ್ಕಾರಗಳು ಜನರಿಗೆ ಶಾಪವಿದ್ದಂತೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಹೇಳಿದೆ. ಈ ಸುಳ್ಳು ಮಾಹಿತಿಯನ್ನು ದೇಶದ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ನೋಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಪ್ರಕಾರ ದೇಶದಲ್ಲಿ ಹೆಚ್ಚಾಗಿರುವ ಬೆಲೆಗಳೆಲ್ಲ ಕಡಿಮೆಯಾಗಿರುವವೇ?. ಜನರು ಬೆಲೆಗಳು ಕಡಿಮೆಯಾಗಿವೆಯೆಂದು ಖುಷಿಯಾಗಿರುವರೇ?. ಜನರ ಖರೀದಿಯ ಸಾಮರ್ಥ್ಯ ಹೆಚ್ಚಾಗಿದೆಯೇ?. ಜನರಿಗೆ ಅಗತ್ಯ ಇರುವ ವಸ್ತುಗಳ ಉತ್ಪಾದನೆ ದೇಶದಲ್ಲಿ ಹೆಚ್ಚಾಗಿದೆಯೇ?. ಆಮದು ಕಡಿಮೆಯಾಗಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರಗಳು ಉತ್ತರಿಸುತ್ತಿಲ್ಲ. ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ರಾಜನಿಗೆ ಬೇಕಾದಂತಹ ವರದಿಗಳನ್ನು ವಾಸ್ತವಕ್ಕೆ ವಿರುದ್ಧವಾಗಿ ಸಿದ್ಧ ಮಾಡಿಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಬಿಜೆಪಿ ಎಂಬುದು ದಿಲ್ಲಿಯಿಂದ ಹಳ್ಳಿಯವರೆಗೆ ‘ಬೊಗಳೆ ಬಿಡುವ ಪಕ್ಷ’ ಎಂದು ಪದೇ ಪದೇ ಸಾಬೀತಾಗುತ್ತಿದೆ. ಅದಕ್ಕಾಗಿಯೆ ಬಿಜೆಪಿಯನ್ನು ‘ಸುಳ್ಳನ್ನು ಉತ್ಪಾದಿಸಿ ಮಾರುವ ಫ್ಯಾಕ್ಟರಿ’ ಎಂದು ಜನರೇ ಕರೆಯುತ್ತಿದ್ದಾರೆ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಹಾರ ಪದಾರ್ಥಗಳು, ವಸತಿ, ಇಂಧನ, ವಿದ್ಯುತ್, ಬಟ್ಟೆ ಹಾಗೂ ಇನ್ನಿತರೆ ವಸ್ತುಗಳು, ಶಿಕ್ಷಣ, ವೈದ್ಯಕೀಯ, ಸಾರಿಗೆ ಮುಂತಾದ ಸೇವೆಗಳು.. ಹೀಗೆ ಮುಖ್ಯವಾದ ವಲಯಗಳಲ್ಲಿನ ಬೆಲೆಗಳನ್ನು ಆಧರಿಸಿ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ, 2012 ರ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ಬೆಲೆಗಳನ್ನು ಹೋಲಿಕೆ ಮಾಡಿ ಪ್ರತಿ ತಿಂಗಳ ಏರಿಳಿತಗಳನ್ನು ಲೆಕ್ಕ ಹಾಕಲಾಗುತ್ತದೆ. ಹಣದುಬ್ಬರದಲ್ಲಿನ ಶೇ.40 ಕ್ಕೂ ಹೆಚ್ಚು ಪಾಯಿಂಟುಗಳು ಆಹಾರ ಸಂಬಂಧಿತ ವಲಯಕ್ಕೆ ನೀಡಲಾಗಿದೆ. ಸೆಪ್ಟೆಂಬರ್ಗಿಂತ ಅಕ್ಟೋಬರ್ ತಿಂಗಳಲ್ಲಿ ಬೆಲೆಗಳು ಶೇ.10 ರಿಂದ ಶೇ.20 ರಷ್ಟು ಹೆಚ್ಚಾಗಿವೆ ಎಂಬುದು ಸಣ್ಣಪುಟ್ಟ ವ್ಯಾಪಾರಿಗಳ ಅಭಿಪ್ರಾಯ ಎಂದಿದ್ದಾರೆ.
ಶಿಕ್ಷಣ ವೆಚ್ಚವೂ ತೀವ್ರವಾಗಿ ಏರಿಕೆಯಾಗಿದೆ. ಕರ್ನಾಟಕದ ಉಚ್ಚ ನ್ಯಾಯಾಲಯವು ಕಾಲೇಜುಗಳ ಶುಲ್ಕ ದರೋಡೆಯನ್ನು ನಿಲ್ಲಿಸಿ ಎಂಬರ್ಥದಲ್ಲಿ ಸರ್ಕಾರಕ್ಕೆ ತಾಕೀತು ಮಾಡಿದೆ. ಆದರೂ ಮೋದಿ ಸರ್ಕಾರ ಮಾತ್ರ ಬೆಲೆಗಳು ಕಡಿಮೆಯಾಗಿವೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದೆ. ಡಾಲರ್ ಎದುರು ರೂಪಾಯಿಯ ಮೌಲ್ಯ ಪಾತಾಳಕ್ಕೆ ತಲುಪುತ್ತಿದೆ. ಡಾಲರಿನಲ್ಲಿ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ರೂಪಾಯಿಯ ಅಪಮೌಲ್ಯದಿಂದಾಗಿ ವಸ್ತುಗಳ ಬೆಲೆ ಶೇ. 16 ರವರೆಗೆ ಹೆಚ್ಚಾಗಿದೆ. ಇದರಿಂದಾಗಿಯೂ ಹಣದುಬ್ಬರ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ.. ಜೆಡಿಎಸ್ನಲ್ಲಿ ಗರಿಗೆದರಿದ ರಾಜಕೀಯ ಲೆಕ್ಕಾಚಾರ