ಬೆಂಗಳೂರು: ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿನ ಭ್ರಷ್ಟಾಚಾರದ ದಾಖಲೆಗಳನ್ನು ರಾಹುಲ್ ಗಾಂಧಿಗೆ ರವಾನಿಸುತ್ತೇನೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಧಮ್ – ತಾಖತ್ ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್‌ಎಸ್‌ಎಸ್ ನಾಯಕರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು ಬಸವರಾಜ್ ಬೊಮ್ಮಾಯಿ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಅಕ್ರಮದ ದಾಖಲೆಗಳನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ, ಸದ್ಯಕ್ಕೆ ದೇಶದ ಪ್ರಧಾನಿ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅಲ್ಲ ಎನ್ನುವುದು ನಿಮ್ಮ ನೆನಪಲ್ಲಿ ಇರಲಿ. ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ಮೋದಿ ಮತ್ತು ನೀವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೊಟ್ಟ ಕುದುರೆ ಏರಲಿಕ್ಕಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಗಾದೆಯನ್ನು ಮತ್ತೆ ಮತ್ತೆ ನಿಜಮಾಡಲು ಹೊರಟಿರುವ ಬಸವರಾಜ್ ಬೊಮ್ಮಾಯಿ ಅವರೇ, ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲ ಕಳೆಯುತ್ತ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆದುಕೊಳ್ಳಬೇಡಿ. ಅಕ್ರಮಗಳು ಯಾರ ಕಾಲದಲ್ಲೇ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದವನು ನಾನು. ಇದಕ್ಕಾಗಿಯೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಈ ಹಿಂದೆ ಮಾಡಿರುವ ಒತ್ತಾಯವನ್ನು ಪುನರುಚ್ಚರಿಸುತ್ತಿದ್ದೇನೆ ಬಸವರಾಜ್ ಬೊಮ್ಮಾಯಿ ಎಂದು ಸಿದ್ದರಾಮಯ್ಯ ಟ್ವೀಟಾಸ್ತ್ರ ಎಸೆದಿದ್ದಾರೆ.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣ ಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ ಬಸವರಾಜ್ ಬೊಮ್ಮಾಯಿ. ಸಾರ್ವಜನಿಕ ಸಭೆಗಳಲ್ಲಿ ವಿರೋಧ ಪಕ್ಷದ ವಿರುದ್ಧ ಅಬ್ಬರಿಸುತ್ತಿರುವ ನಿಮಗೆ, ನೀವು ಎರಡೂವರೆ ಸಾವಿರ ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ನಿಮಗೆ ಇಲ್ಲ. ಇದೆಂತಹ ನಿಮ್ಮ ಹೇಡಿತನ ಬಸವರಾಜ್ ಬೊಮ್ಮಾಯಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಬಗ್ಗೆ ರಾಹುಲ್ ಗಾಂಧಿ ಅವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿ.ಕೆ. ಶಿವಕುಮಾರ್ ವಿರುದ್ಧ ಇಡಿ, ಐಟಿಗಳನ್ನು ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆ ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ್ ಗಾಂಧಿಯವರಿಗೆ ಕಳುಹಿಸಿ ಬಿಡಿ ಬಸವರಾಜ್ ಬೊಮ್ಮಾಯಿ ಎಂದು ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ: ಕೆ ಎಸ್ ಈಶ್ವರಪ್ಪ ವಾಗ್ದಾಳಿ