ಬೆಂಗಳೂರು : ಅಧಿಕಾರ ಕಳೆದುಕೊಂಡು ಪ್ರತಿಪಕ್ಷದ ಸಾಲಿನಲ್ಲಿ ಸ್ಥಾನ ಪಡೆದಿದ್ದರೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷದ ಮೊಗಸಾಲೆಯತ್ತ ಹೆಜ್ಜೆ ಹಾಕಿದರು. ತಕ್ಷಣವೇ ಎಚ್ಚೆತ್ತು ಪ್ರತಿಪಕ್ಷದ ಮೊಗಸಾಲೆ ಕಡೆ ಬಂದ ಘಟನೆ ನಡೆಯಿತು.
ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಖುಷಿಯಾಗಿರೋ ಬಿಜೆಪಿ ಶಾಸಕರು ಒಂದೆಡೆಯಾದರೆ, ಕಲಾಪಕ್ಕೆ ಬರುವಾಗ ಮರೆತು ಆಡಳಿತ ಪಕ್ಷದ ಮೊಗಸಾಲೆ ಕಡೆ ಕಾಂಗ್ರೆಸ್ ಶಾಸಕರು ಹೆಜ್ಜೆ ಹಾಕಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಡಳಿತ ಪಕ್ಷದ ಮೊಗಸಾಲೆಯತ್ತ ಹೆಜ್ಜೆ ಹಾಕಿದ್ದು, ಕೂಡಲೇ ಜೊತೆಯಲ್ಲಿದ್ದ ಶಾಸಕರು ಈ ಕಡೆ ಸಾರ್ ಎನ್ನುತ್ತಿದ್ದಂತೆ, ಅಯ್ಯೋ ಹೌದಲ್ವ ಅಂತ ವಿರೋಧ ಪಕ್ಷದ ಮೊಗಸಾಲೆಗೆ ನಗುತ್ತಾ ಬಂದರು.
ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ಬಿ. ಶ್ರೀರಾಮುಲು ಜೊತೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಮತ್ತು ಕಾಂಗ್ರೆಸ್ ಎಂಎಲ್ ಸಿ ರಘು ಆಚಾರ್ ನಗುತ್ತಾ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಏನಯ್ಯಾ ಇಬ್ಬರು ಡಿಸಿಎಂಗಳ ಜೊತೆ ಮಾತಾಡ್ತಿದ್ದಿಯಾ, ಒಬ್ಬರ ಜೊತೆ ಮಾತಾಡು ಸಾಕು ಎನ್ನುತ್ತಾ ಕಾಲೆಳೆದರು.