ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಯಶವಂತಪುರ ವಾರ್ಡ್ನಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಪ್ರಚಾರ ಮುಂದುವರೆಸಿದರು.
ಆರ್ಟಿಓ ಕಚೇರಿ ರಸ್ತೆಯಲ್ಲಿ ಪ್ರಚಾರ ನೆಡೆಸುವ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ದಾಳಿ ನೆಡೆಸಿದರು. ಈ ಚುನಾವಣೆ ಅನಗತ್ಯವಾಗಿ ಹೇರಲಾಗಿದ್ದು, ಜನರ ತೆರಿಗೆ ಹಣ ಪೋಲಾಗುತ್ತಿದೆ. ಹಣ ಪಡೆದ ಮುನಿರತ್ನ, ಬೆಳೆಸಿದ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಬೆಳಗ್ಗೆ-ಸಂಜೆ ನನ್ನ ಮನೆ ಬಾಗಿಲು ಕಾಯುತ್ತಿದ್ದ ಮುನಿರತ್ನ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಇಂದು ಕೋಮುವಾದಿ ಪಕ್ಷಕ್ಕೆ ಸೇರಿ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಸಿಎಂ ಆಗಿದ್ದ ವೇಳೆ, ಸುಮಾರು 2000 ಕೋಟಿ ರೂ. ಹಣವನ್ನು ಈ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಮಂಜೂರು ಮಾಡಿರುವುದಾಗಿ ತಿಳಿಸಿದರು. ಮನೆ ಮಗಳು ಕುಸುಮಾ ವಿದ್ಯಾವಂತೆ ಆಗಿದ್ದು, ಅವರಿಗೆ ಒಂದು ಅವಕಾಶ ಕೊಡಬೇಕೆಂದು ಜನರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮಾತನಾಡಿ, ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇರಲಿ. ಮತ ಕೊಟ್ಟು ನಿಮ್ಮ ಮನೆ ಮಗಳಾಗಿ ಕೆಲಸ ಮಾಡುವ ಅವಕಾಶ ನೀಡಿ ಎಂದು ಕೇಳಿಕೊಂಡರು.