ಬೆಂಗಳೂರು: ಇವತ್ತು ಸಿದ್ದರಾಮಯ್ಯನವರಿಗಾಗಲಿ, ಡಿ.ಕೆ.ಶಿವಕುಮಾರ್ ಅವರಿಗಾಗಲಿ ಉದ್ಯೋಗ ಇಲ್ಲ, ನಿರುದ್ಯೋಗಿಗಳಾಗಿದ್ದಾರೆ. ಅದಕ್ಕಾಗಿ ಈಗ ಉದ್ಯೋಗ ಹುಡುಕಿಕೊಂಡು ಅಲೆಯುತ್ತಿದ್ದಾರೆ ಅಷ್ಟೇ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೃಷಿ ಕಾಯ್ದೆ ಪರಿವರ್ತನೆ ಬಗ್ಗೆ ಹಿಂದೆ ಮನಮೋಹನ್ ಸಿಂಗ್ ಇದ್ದಾಗಲೇ ಪ್ರಾರಂಭ ಆಗಿದ್ದು. ಆದರೆ ಇದರ ಬಗ್ಗೆ ದೇಶದಲ್ಲಿ ಎಲ್ಲೂ ದೊಡ್ಡ ಹೋರಾಟ ಆಗಿಲ್ಲ. ಕಾಂಗ್ರೆಸ್ನವರಿಗೆ ಏನು ಕೆಲಸ ಇಲ್ಲ. ಕಳೆದ 6 ವರ್ಷದಲ್ಲಿ ನರೇಂದ್ರ ಮೋದಿಗೆ ಬಗ್ಗೆ ಆರೋಪ ಮಾಡಲು ಏನೂ ಸಿಕ್ಕಿಲ್ಲ. ಇವಾಗ ಈ ವಿಷಯದ ಮೂಲಕ ಹೋರಾಟ ಮಾಡ್ತಿದ್ದಾರೆ. ಬರೀ ಪ್ರತಿಭಟನೆ ಮಾಡುವ ಉದ್ದೇಶದಿಂದ ಪ್ರತಿಭಟನೆ ಮಾಡ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಲಸ ಇಲ್ಲದೆ ಪ್ರತಿಭಟನೆ ಮಾಡೋ ಇವರಿಗೆ ಜನರು ಕೂಡ ಬೆಂಬಲ ಕೊಟ್ಟಿಲ್ಲ. ಕೇಂದ್ರದಲ್ಲಿ ನಾಯಕತ್ವ ಇಲ್ಲದ ಪಾರ್ಟಿ ಅಂದರೆ ಕಾಂಗ್ರೆಸ್. ಯಾವುದೇ ನಾಯಕತ್ವ ಇಲ್ಲದೇ ದಿಕ್ಕಾಪಾಲಾಗಿ ಹೋಗಿ ಇವಾಗ ನಗೆಪಟಾಲಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪ್ರತಿಭಟನೆ ಒಂದು ನಾಟಕ
ಕಾಂಗ್ರೆಸ್ನವರ ಪ್ರತಿಭಟನೆ ಒಂದು ನಾಟಕ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಪಿಎಂಸಿ, ಭೂ ಸುಧಾರಣೆ ಕಾನೂನುಗಳು ಅವರ ಕಾಲದಲ್ಲೇ ಬಂದಿದ್ದು. ರೈತರು, ರೈತ ಸಂಘಟನೆಗಳಿಗೆ ಉತ್ತರ ಕೊಡಬೇಕಾಗಿರೋದು ಕಾಂಗ್ರೆಸ್ನವರೇ. ಅವರು ಅಧಿಕಾರದಲ್ಲಿದ್ದಾಗ ಇವೇ ಕಾಯ್ದೆಗಳನ್ನು ಅವರು ತಂದಿದ್ರು. ಈಗ ಅವೇ ಕಾನೂನುಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ‘ರಾಜಭವನ ಚಲೋ’- ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ