ಬೆಂಗಳೂರು: ರೈತ ಹೋರಾಟಗಾರ, ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಮಾರುತಿ ಮಾನ್ಪಡೆ ನಿಧನಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ, ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಮಾರುತಿ ಮಾನ್ಪಡೆ ಅವರ ನಿಧನದಿಂದ ದು:ಖಿತನಾಗಿದ್ದೇನೆ. ತಮ್ಮ ಇಡೀ ಬದುಕನ್ನೇ ರೈತರು, ಕಾರ್ಮಿಕರು, ಶೋಷಿತರ ಪರ ಹೋರಾಟಕ್ಕೆ ಮುಡಿಪಾಗಿಟ್ಟು ಅರ್ಥಪೂರ್ಣವಾಗಿ ಬದುಕಿದ ಕಾಮ್ರೆಡ್ ಮಾನ್ಪಡೆ ಅವರು ನನಗೂ ಆತ್ಮೀಯರಾಗಿದ್ದರು. ಅವರಿಗೆ ದು:ಖತಪ್ತ ವಿದಾಯ ಎಂದು ಬರೆದುಕೊಂಡಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಮಿಕ, ರೈತ ಹಾಗೂ ಶೋಷಿತ ವರ್ಗಗಳ ಪರವಾಗಿ ಸದಾ ಧ್ವನಿಯೆತ್ತುತ್ತಾ ಪ್ರಜಾಪ್ರಭುತ್ವ ಉಳಿವಿಗೆ ಅವಿರತ ಹೋರಾಟ ನಡೆಸುತ್ತಿದ್ದ ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ. ಅವರು ನಿಧನರಾಗಿದ್ದು ದುಃಖದ ಸಂಗತಿ. ಮಾನ್ಪಡೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಟ್ವೀಟ್ ಮಾಡಿದ್ದು, ರೈತಾಪಿ ವರ್ಗ, ಕೃಷಿ ಮತ್ತು ಕೂಲಿ ಕಾರ್ಮಿಕರ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರುತಿದ್ದ ಹಿರಿಯ ಮುಖಂಡ ಮಾರುತಿ ಮಾನ್ಪಡೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟ್ಟರ್ನಲ್ಲಿ, ನಾಲ್ಕು ದಶಕಗಳಿಂದ ರೈತ ಹಾಗೂ ಕಾರ್ಮಿಕ ಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದ, ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷರು ಹಾಗೂ ಹಿರಿಯ ಹೋರಾಟಗಾರರಾದ ಮಾರುತಿ ಮಾನ್ಪಡೆ ಅವರ ನಿಧನದಿಂದ ರೈತ ಪರ ಧ್ವನಿಯೊಂದನ್ನು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು, ಭಗವಂತನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹಲವು ನಾಯಕರು ಕೂಡ ಮಾರುತಿ ಮಾನ್ಪಡೆ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.